ವಾಟ್ಸಾಪ್ ಬರಹ ಡೆತ್ ನೋಟ್ ಅಲ್ಲ, ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಇಂದು, ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಇಲಾಖೆಯಿಂದ ಸಂತೋಷ್ ಅವರಿಗೆ ವರ್ಕ್ ಆರ್ಡರ್ ಕೊಟ್ಟಿಲ್ಲವೆಂದು ಸ್ಪಷ್ಟವಾಗಿಯೇ ಹೇಳಲಾಗಿದೆ. ಹೀಗಿದ್ದೂ ನನ್ನ ವಿರುದ್ಧ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಪಕ್ಷದವರು ಒತ್ತಾಯಿಸುತ್ತಿದ್ದಾರೆ. ಯಾವುದೇ ದಾಖಲೆ ಇಲ್ಲದೇ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದರು.
ನಾನು ರಾಜೀನಾಮೆ ಕೊಡುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷರಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ತಿಳಿಸಿದ್ದೇನೆ. ವಾಟ್ಸಾಪ್ ಬರಹ ಡೆತ್ ನೋಟ್ ಅಲ್ಲ. ಜೊತೆಗೆ ಆ ವಾಟ್ಸಪ್ ಬರೆದವರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಅವರು ದಿಢೀರ್ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಂತೋಷ ಅವರು ಡೆತ್ ನೋಟ್ ಬರೆದಿಲ್ಲ. ಡೆತ್ ನೋಟ್ ಬರೆಯದೇ ಇದ್ದರೂ ಸುಳ್ಳು ಮಾಹಿತಿ ಹಬ್ಬಿಸಿ, ಮತ್ತೆ ರಾಜೀನಾಮೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಬೇಕಾದರೆ ಮೊದಲು ಆಡಳಿತಾತ್ಮಕ ಅನುಮೋದನೆ, ಟೆಕ್ನಿಕಲ್ ಅನುಮೋದನೆ, ಸ್ಯಾಂಕ್ಷನ್ ಮಾಡಬೇಕು. ವರ್ಕ್ ಆರ್ಡರ್ ನೀಡಬೇಕು. ಈ ಎಲ್ಲ ಪ್ರಕ್ರಿಯೆ ಮುಗಿದ ಕೆಲಸ ಮುಗಿದ ಮೇಲೆ ಬಿಲ್ ಹಣ ಬಿಡುಗಡೆಯಾಗಬೇಕು ಎಂದು ತಿಳಿಸಿದರು.
ಈಶ್ವರಪ್ಪನ ಕಡೆಯವರು ಕಮಿಷನ್ ಕೇಳಿದ್ದಾರೆ ಎಂದು ಸಂತೋಷ ಆರೋಪಿಸಿದ್ದ. ಆತ ದೆಹಲಿ ಹೋಗಿ ಹೇಳಿದ್ದ, ಬಹಳ ಕಷ್ಟದಲ್ಲಿದ್ದೇನೆ ಎಂದು ಹೇಳಿದವನಿಗೆ ದೆಹಲಿಗೆ ಹೋಗಲು ಟಿಕೆಟ್ ಮಾಡಿಕೊಟ್ಟಿದ್ದು ಯಾರು? ನಮ್ಮ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್, ಕೇಂದ್ರ ಸಚಿವರಿಗೆ ಪತ್ರ ಬರೆದು ಸಂತೋಷ್ಗೆ ವರ್ಕ್ ಆರ್ಡರ್ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಟಿವಿ ವಾಹಿನಿ ಹಾಗೂ ಸಂತೋಷ್ ಪಾಟೀಲ್ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಕೋರ್ಟ್ ಅವರಿಬ್ಬರಿಗೂ ನೋಟಿಸ್ ನೀಡಿದೆ. ಸಂತೋಷ ನೋಟಿಸಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದ ಅವರು ಕಾಂಗ್ರೆಸ್ನವರದ್ದು ನಿರಾಧಾರ ಆರೋಪ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಈ ಷಡ್ಯಂತ್ರದ ಹಿಂದೆ ಯಾರು ಇದ್ದಾರೆ ಎಂಬುದರ ಅಮೂಲಾಗ್ರ ತನಿಖೆಯಾಗಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.
https://youtu.be/hm_RqQg_qUg