ಮಣಿಪುರ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ.. 11 ಜಿಲ್ಲೆಗಳಲ್ಲಿ ವಿಧಿಸಿದ್ದ ಕರ್ಫ್ಯೂ ತೆರವು ಮಾಡಲಾಗಿದೆ. ಆದರೆ, ಪರಿಸ್ಥಿತಿ ಈಗಲೂ ಬೂದಿಮುಚ್ಚಿದ ಕೆಂಡದಂತೆ ಇದೆ. ಅಷ್ಟಕ್ಕೂ ಮಣಿಪುರದಲ್ಲಿ ಹಿಂಸಾಚಾರಕ್ಕೆ ಕಾರಣಗಳೇನು ಎಂಬುದನ್ನು ನೋಡೋಣ
ಮಣಿಪುರ ಭೌಗೋಳಿಕ, ಸಾಮಾಜಿಕ ಸ್ವರೂಪ ಹೇಗಿದೆ?
ಮಣಿಪುರದ ಜನಸಂಖ್ಯೆ ಸದ್ಯ 30ರಿಂದ 35 ಲಕ್ಷ ಇದೆ. ಇಲ್ಲಿ ಪ್ರಧಾನವಾಗಿ ಮೈತೇಯಿ, ನಾಗಾ, ಕುಕಿ ಎಂಬ ಮೂರು ಬುಡಕಟ್ಟು ಸಮುದಾಯಗಳಿವೆ
ಮೈತೇಯಿ ಸಮುದಾಯದಲ್ಲಿ ಪ್ರಧಾನವಾಗಿ ಹಿಂದೂಗಳು ಇದ್ದಾರೆ. ಕೆಲ ಮುಸ್ಲಿಮರು ಕೂಡ ಇದ್ದಾರೆ. ಇಲ್ಲಿನ ಜನಸಂಖ್ಯೆಯಲ್ಲಿ ಮೈತೇಯಿ ಸಮುದಾಯದವರೇ ಹೆಚ್ಚು.
ನಾಗಾ, ಕುಕಿ ಬುಡಕಟ್ಟಿನವರು ಪ್ರಧಾನವಾಗಿ ಕ್ರಿಶ್ಚಿಯನ್ನರು.
ರಾಜಕೀಯವಾಗಿ ನೋಡಿದಲ್ಲಿ ಇಲ್ಲಿನ 60 ಶಾಸಕರಲ್ಲಿ 40 ಮಂದಿ ಮೈತೇಯಿ ಬುಡಕಟ್ಟಿಗೆ ಸೇರಿದವರೇ ಆಗಿದ್ದಾರೆ. ಉಳಿದ ೨೦ ಶಾಸಕರು ನಾಗಾ, ಕುಕಿ ಸಮುದಾಯದವರು.
ಮಣಿಪುರ ಈವರೆಗೂ 12 ಮಂದಿ ಮುಖ್ಯಮಂತ್ರಿಗಳನ್ನು ಕಂಡಿದೆ. ಇದರಲ್ಲಿ ಇಬ್ಬರು ಮಾತ್ರ ಶೆಡ್ಯೂಲ್ಡ್ ಸಮುದಾಯಕ್ಕೆ ಸೇರಿದವರು.
ಮಣಿಪುರ ಭೌಗೋಳಿಕವಾಗಿ ಗುಡ್ಡಗಾಡು ಪ್ರಾಂತ್ಯ.. ಇಂಫಾಲ ಇದರ ರಾಜಧಾನಿ.
ಮಣಿಪುರದ ಶೇಕಡಾ 10ರಷ್ಟು ಭೂಭಾಗದಲ್ಲಿ ಮೈತೇಯಿ ಸಮುದಾಯದ ಅಧಿಪತ್ಯವಿದೆ.
ಇಂಫಾಲ ಕಣಿವೆಯಲ್ಲಿ ಪ್ರಧಾನವಾಗಿ ಮೈತೇಯಿ ಸಮುದಾಯ ಇದೆ. ಉಳಿದ 90ರಷ್ಟು ಪ್ರದೇಶದಲ್ಲಿ ಗಿರಿಜನರು ನೆಲೆಸಿದ್ದಾರೆ.
ಪ್ರತಿಭಟನೆ, ಹಿಂಸಾಚಾರಕ್ಕೆ ಪ್ರಧಾನ ಕಾರಣ ಏನು?
ಮಣಿಪುರದಲ್ಲಿ ೩೪ ಶೆಡ್ಯೂಲ್ಡ್ ಬುಡಕಟ್ಟುಗಳಿವೆ. ಇದರಲ್ಲಿ ಹೆಚ್ಚಿನವರು ನಾಗಾ, ಕುಕಿ ಸಮುದಾಯಗಳಿಗೆ ಸೇರಿದ್ದಾಗಿವೆ. ಮಣಿಪುರ ಜನಸಂಖ್ಯೆ ಶೇಕಡಾ 64ರಷ್ಟಿರುವ ಮೈತೇಯಿ ಸಮುದಾಯ ತಮಗೆ ಎಸ್ಟಿ ಮೀಸಲಾತಿ ಕಲ್ಪಿಸಿ ಎಂದು ಕೇಳುತ್ತಿದೆ. ಮೈತೇಯಿ ಕಮ್ಯುನಿಟಿಯ ಬೇಡಿಕೆ ಹಳೆಯದೇ. ಆದರೆ, ಹೈಕೋರ್ಟ್ ತೆಗೆದುಕೊಂಡ ಒಂದು ನಿರ್ಣಯದ ಕಾರಣ ಅಲ್ಲಿ ಮೀಸಲಾತಿ ಅಂಶ ಮುನ್ನೆಲೆಗೆ ಬಂದಿದೆ.
ನಾಲ್ಕು ವಾರಗಳಲ್ಲಿ ಮೈತೇಯಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವ ಅಂಶವನ್ನು ಪರಿಗಣಿಸಬೇಕು ಎಂದು ಏಪ್ರಿಲ್ ೧೯ರಂದು ಮಣಿಪುರ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಸರ್ಕಾರಕ್ಕೆ ಆದೇಶ ನೀಡಿತ್ತು.
ಈ ತೀರ್ಪನ್ನು ವಿರೋಧಿಸಿ ಚುರಾಚಂದ್ಪುರದ ಟೊರ್ಬಾಂಗ್ನಲ್ಲಿ ಆಲ್ ಟ್ರೈಬಲ್ ಸ್ಟುಡೆಂಟ್ಸ್ ಯೂನಿಯನ್ ಮಣಿಪುರ ಸಂಸ್ಥೆ ಬೃಹತ್ ರ್ಯಾಲಿ ನಡೆಸಿತ್ತು. ಆದಿವಾಸಿ ಏಕತಾ ಮೋರ್ಚಾ ಹೆಸರಿನಲ್ಲಿ ನಡೆದ ರ್ಯಾಲಿಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ರ್ಯಾಲಿ ಸಮಯದಲ್ಲಿಯೇ ಹಿಂಸಾಚಾರ ಶುರುವಾಯಿತು ಎನ್ನುವುದು ಆರೋಪ.
ಚುರಾಚಂದ್ಪುರ ಸೇರಿ ಸೇನಾಪತಿ, ಉಖ್ರುಲ್, ಕಂಗ್ಪೋಕ್ಸಿಯಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಇಂತಹ ರ್ಯಾಲಿ, ಸಮಾವೇಶಗಳು ನಡೆದಿವೆ. ವಿಷ್ಣುಪುರ, ಚುರಾಚಂದ್ಪುರ ಜಿಲ್ಲೆಗಳಲ್ಲಿ ಅತೀ ಹೆಚ್ಚು ಹಿಂಸಾಚಾರ ನಡೆದಿದೆ. ಇಂಘಾಲದಲ್ಲಿಯೂ ಹಿಂಸೆ ನಡೆದಿದೆ.
ಏಕೆ ವಿವಾದ?
2011ರ ಸೆನ್ಸಸ್ ಪ್ರಕಾರ ಮಣಿಪುರದ ಜನಸಂಖ್ಯೆ 28 ಲಕ್ಷ.. ಇದರಲ್ಲಿ ಮೈತೇಯಿ ಸಮುದಾಯ ಶೇಕಡಾ 53ರಷ್ಟಿದೆ. ಕುಕಿ ಸಮುದಾಯದ ಪ್ರಮಾಣ ಶೇಕಡಾ 30ರಷ್ಟು.
ಒಂದು ವೇಳೆ ಬಹುಸಂಖ್ಯಾತ ಮೈತೇಯಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕೊಟ್ಟಲ್ಲಿ ತಮಗೆ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಅವಕಾಶಗಳು ಕಡಿಮೆ ಆಗುತ್ತವೆ ಎಂಬುದು ಕುಕಿ ಸಮುದಾಯದ ಆತಂಕ.