ನಗರದ ಹೊರವಲಯದ ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮದ ಮಸೀದಿ ಕಟ್ಟಡದಲ್ಲಿ ಪ್ರಾಚೀನ ಕಾಲದ ದೇವಾಲಯದ ಮಾದರಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ ಪುರಂದರ ಅವರು ಭೇಟಿ ನೀಡಿದ್ದಾರೆ.
ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮದ ಗಂಜಿಮಠ ಪಂಚಾಯಿತಿಯಲ್ಲಿರುವ ಸರ್ವೇ ನಂ 1/10 ನಲ್ಲಿ ಅಸ್ಸಾಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ ಮಸೀದಿಯಿದ್ದು, ಇದರ ನವೀಕರಣ ಕಾರ್ಯಕ್ಕಾಗಿ ಮಸೀದಿ ಅರ್ಧ ಕಟ್ಟಡ ಕೆಡವಿದಾಗ ಪುರಾತನ ದೇವಸ್ಥಾನದ ಮಾದರಿ ಪತ್ತೆಯಾಗಿದೆ.
ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿವೆ. ಜೈನ ಅಥವಾ ಹಿಂದೂ ಧರ್ಮಕ್ಕೆ ಸೇರಿದ ದೇವಸ್ಥಾನವಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪುರಾತತ್ವ ಇಲಾಖೆಯಿಂದ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ವಿಶ್ವಹಿಂದೂ ಪರಿಷತ್ ಪ್ರಮುಖರು ಹಾಗೂ ಕಾರ್ಯಕರ್ತರು ಭೇಟಿ ಕೊಟ್ಟಿದ್ದಾರೆ. ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕಲು ತಹಶೀಲ್ದಾರರು ಮುಂದಾಗಿದ್ದಾರೆ.
ತಹಶೀಲ್ದಾರರು ಎರಡೂ ಸಮುದಾಯಗಳ ಮುಖಂಡರ ಜೊತೆ ಶಾಂತಿ ಮಾತುಕತೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.