ರಾಜ್ಯದಲ್ಲಿ ಚಾರಣಕ್ಕೆ ನಿಷೇಧ ಹೇರಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ನಿಷೇಧ ಹೇರುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.
ಜನವರಿ 26ರಂದು ದಕ್ಷಿಣ ಕನ್ನಡದ ಜಿಲ್ಲೆಯ ಕುಮಾರಪರ್ವತದಲ್ಲಿ ಸಾವಿರಾರು ಮಂದಿ ಚಾರಣಕ್ಕೆ ಬಂದ ದೃಶ್ಯ ಹರದಾಡಿದ ಬಳಿಕ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
ರಾಜ್ಯದ ಯುವಜನರಲ್ಲಿ ಇತ್ತೀಚೆಗೆ ಅರಣ್ಯವ್ಯಾಪ್ತಿಯ ಗಿರಿ ಶಿಖರಗಳಲ್ಲಿ ಚಾರಣ ಮಾಡುವ ಹವ್ಯಾಸ ಅಧಿಕವಾಗಿದ್ದು, ಇದು ವಾರಾಂತ್ಯದಲ್ಲಿ ಜನದಟ್ಟಣೆಗೆ ಕಾರಣವಾಗಿದೆ. ಹೀಗೆ ಬರುವವರು ಅರಣ್ಯದ ಅಂಚಿನ ಗ್ರಾಮಗಳಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮನಸೋ ಇಚ್ಛೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಉಳಿದ ಆಹಾರ ಪದಾರ್ಥ ಇತ್ಯಾದಿಗಳನ್ನು ಎಸೆಯುತ್ತಿದ್ದು, ಇದು ವನ್ಯಜೀವಿಗಳಿಗೆ ಅಪಾಯ ತರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಇದೇ ತಿಂಗಳು 26 ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಮಾಧ್ಯಮಗಳಲ್ಲೂ ವರದಿಯಾಗಿದೆ. ಕೆಲವರು ಟೆಂಟ್ ಹಾಕಿ ರಾತ್ರಿ ಪರ್ವತದಲ್ಲಿ ಉಳಿಯುತ್ತಾರೆ ಎನ್ನಲಾಗಿದೆ. ಪರಿಸರ ತಜ್ಞರು ಅರಣ್ಯ ಉಳಿವಿನ ಬಗ್ಗೆ ತಮ್ಮ ಕಳಕಳಿ. ಆತಂಕ ವ್ಯಕ್ತಪಡಿಸಿದ್ದಾರೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಚಾರಣಕ್ಕೆ ಜನರು ದಟ್ಟ ಅರಣ್ಯವಿರುವ ಗಿರಿ ಪ್ರದೇಶಗಳಿಗೆ, ಪಶ್ಚಿಮಘಟ್ಟಕ್ಕೆ ಪ್ರತಿವಾರವೂ ಆಗಮಿಸಿದರೆ ನಿಯಂತ್ರಿಸುವುದು ಮತ್ತು ಅವರ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗುತ್ತದೆ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತದೆ ಮತ್ತು ಜಲ ಮೂಲಗಳೂ ಕಲುಷಿತಗೊಳ್ಳುವ ಅಪಾಯ ಇದೆ.
ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಚಾರಣ ತಾಣ (ಟ್ರಕ್ಕಿಂಗ್ ಪಾಯಿಂಟ್)ಗಳಲ್ಲೂ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಮತ್ತು ನಿರ್ದಿಷ್ಟ ಸಂಖ್ಯೆಗೆ ಸೀಮಿತಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಮಾಣಿತ ಕಾರ್ಯ ವಿಧಾನ (SOP) ರೂಪಿಸುವವರೆಗೆ ಆನ್ ಲೈನ್ ಬುಕ್ಕಿಂಗ್ ಇಲ್ಲದ ಎಲ್ಲ ಚಾರಣ ತಾಣಗಳಲ್ಲಿ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸುವಂತೆ ಸೂಚಿಸಿದೆ
ಎಂದು ಅರಣ್ಯ ಸಚಿವರ ಈಶ್ವರ್ ಖಂಡ್ರೆ ಅವರು ಪತ್ರದಲ್ಲಿ ಸೂಚಿಸಿದ್ದಾರೆ.