ತಿರುಪತಿ ಭಕ್ತರಿಂದ ತುಂಬಿ ತುಳುಕುತ್ತಿದೆ. ಭಕ್ತರನ್ನು ನಿಯಂತ್ರಿಸಲು ಟಿಟಿಡಿ ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ. ಆದ್ದರಿಂದ ತಿರುಪತಿ ಭೇಟಿಯನ್ನು 4 ರಿಂದ 5 ದಿನ ಮುಂದೂಡುವಂತೆ ಆಡಳಿತ ಮಂಡಳಿ ಭಕ್ತರಿಗೆ ಮನವಿ ಮಾಡಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತರು 48 ಗಂಟೆಗಳ ಕಾಲ ಕಾಯುವಷ್ಟು ಜನದಟ್ಟಣೆ ಉಂಟಾಗಿದೆ. ಇದರಿಂದಾಗಿ ತಿರುಪತಿ ದೇವಾಲಯ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಂತಾದ ಕಡೆ ಭಕ್ತರೇ ಕಾಣಿಸುತ್ತಿದ್ದಾರೆ.
ಶನಿವಾರ ಮತ್ತು ಭಾನುವಾರದ ಹಿನ್ನಲೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ವೈಕುಂಠ ಕಾರ್ಯಕ್ರಮದ ಸಮಯಕ್ಕಿಂತಲೂ ಈಗ ಹೆಚ್ಚಿನ ಜನ ಆಗಮಿಸುತ್ತಿದ್ದಾರೆ. 2 ಕಿ. ಮೀ. ತನಕ ಭಕ್ತರು ಸಾಲುಗಟ್ಟಿ ನಿಂತಿದ್ದು, ವಿವಿಧ ಕೌಂಟರ್ಗಳಲ್ಲಿ ಭಕ್ತರನ್ನು ನಿಯಂತ್ರಿಸುವುದು ಸವಾಲಾಗಿದೆ.
ಲಗೇಜ್ ಕೌಂಟರ್, ಲಡ್ಡು ಕೌಂಟರ್, ಬಸ್ ನಿಲ್ದಾಣ, ರಸ್ತೆಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಭಕ್ತರು ಆಗಮಿಸಿದರೂ ವಸತಿ ವ್ಯವಸ್ಥೆ ಮಾಡುವುದು ಸವಾಲಾಗಿದೆ. ಈ ಹಿನ್ನಲೆಯಲ್ಲಿ ಟಿಟಿಡಿ ತಿರುಪತಿ ಭೇಟಿ ಮುಂದೂಡುವಂತೆ ಭಕ್ತರಿಗೆ ಮನವಿ ಮಾಡಿದೆ.
ಕೋವಿಡ್ ನಿಯಮಗಳ ಸಡಿಲಿಕೆ ಬಳಿಕ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಟಿಟಿಡಿ ಭಕ್ತರು ಪ್ರವಾಸ ಮುಂದೂಡುವಂತೆ ಹೇಳಿದೆ.
ಆಂಧ್ರ ಪ್ರದೇಶ ಮಾತ್ರವಲ್ಲ ಅಕ್ಕಪಕ್ಕದ ರಾಜ್ಯಗಳ ಭಕ್ತರು ವಾರಾಂತ್ಯದ ರಜೆ ಸಂದರ್ಭದಲ್ಲಿ ತಿರುಪತಿಗೆ ಭೇಟಿ ನೀಡಿದ್ದು, ದೇವಾಲಯದ ಆವರಣ ಭಕ್ತರಿಂದ ತುಂಬಿ ಹೋಗಿದೆ. ಸಾಮಾನ್ಯ ದರ್ಶನ ಪಡೆಯಲು 48 ಗಂಟೆಗಳ ಕಾಲವಾಗುತ್ತಿದೆ. ಈ ಹಿನ್ನಲೆಯಲ್ಲಿ ಟಿಟಿಟಿ ಶನಿವಾರ ಭಕ್ತರಿಗೆ ದೇವಾಲಯದ ಭೇಟಿ ಮುಂದೂಡಿ ಎಂದು ಹೇಳಿದೆ.
ಜೂನ್ ತಿಂಗಳು ಆರಂಭವಾದರೆ ಮಳೆಗಾಲದಲ್ಲಿ ತಿರುಪತಿ ಭೇಟಿ ಕಷ್ಟ. ಅಲ್ಲದೇ ಶಾಲೆಗಳು ಆರಂಭವಾದರೆ ಮಕ್ಕಳಿಗೆ ರಜೆ ಸಿಗುವುದು ಕಷ್ಟ ಎಂಬ ಕಾರಣಕ್ಕೆ ಮೇ ಅಂತ್ಯದಲ್ಲಿ ಲಕ್ಷಾಂತರ ಭಕ್ತರು ತಿರುಪತಿಗೆ ಭೇಟಿ ನೀಡುತ್ತಿದ್ದಾರೆ.