ಗುಜರಾತ್ ರಾಜ್ಯದ ಎಲ್ಲ 26 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮೇ 7ರಂದು ಒಂದೇ ಹಂತದಲ್ಲಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ.
ಆದರೆ ಬಿಜೆಪಿ ಘೋಷಿಸಿದ ಬಳಿಕ ಈಗ ಹಾಲಿ ಸಂಸದರೂ ಆಗಿರುವ ಇಬ್ಬರು ಅಭ್ಯರ್ಥಿಗಳು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಘೋಷಣೆ ಮಾಡಿದ್ದಾರೆ.
ವಡೋದರಾ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ, ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ರಂಜನ್ಬೆನ್ ಧನಂಜಯ್ ಭಟ್ ಅವರು ತಾವು ವೈಯಕ್ತಿಕ ಕಾರಣಗಳಿಂದ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಘೋಷಿಸಿದ್ದಾರೆ.
ರಂಜನ್ಬೆನ್ ಧನಂಜಯ್ ಭಟ್ ಅವರಿಗೆ ಮತ್ತೆ ಟಿಕೆಟ್ ನೀಡಿರುವುದನ್ನು ಖಂಡಿಸಿ ಮತ್ತು ವಿರೋಧಿಸಿ ವಡೋದರಾ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರೇ ಬ್ಯಾನರ್ಗಳನ್ನು ಹಾಕಿದ್ದರು.
1998ರ ಲೋಕಸಭಾ ಚುನಾವಣೆಯಿಂದ ಸತತ ಏಳೂ ಚುನಾವಣೆಗಳಲ್ಲೂ ಈ ಕ್ಷೇತ್ರದಲ್ಲಿ ಬಿಜೆಪಿಯೇ ಗೆದ್ದಿದೆ.
ಅದರಲ್ಲೂ ವಿಶೇಷವಾಗಿ 2014ರಲ್ಲಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಪ್ರಧಾನಿ ಆದ ವೇಳೆ ವಡೋದರಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದಲೂ ಆಯ್ಕೆಯಾಗಿದ್ದ ಕಾರಣ ವಡೋದರಾ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮೋದಿ ಅವರು ಕ್ಷೇತ್ರ ತ್ಯಾಗ ಮಾಡಿದ ಬಳಿಕ 2014ರಲ್ಲೇ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ರಂಜನ್ಬೆನ್ ಧನಂಜಯ್ ಭಟ್ ಅವರು ಆಯ್ಕೆ ಆಗಿದ್ದರು. 2019ರಲ್ಲಿ ಮರು ಆಯ್ಕೆ ಆದರು.
ಇನ್ನು ಸಬರ್ಕಾಂತ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರೂ ಆಗಿರುವ ಈ ಬಾರಿ ಮತ್ತೆ ಟಿಕೆಟ್ ಪಡೆದಿರುವ ಭಿಕಾಜಿ ಥಾಕೂರು ವೈಯಕ್ತಿಕ ಕಾರಣದಿಂದ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
2001ರಿಂದ ನಡೆದಿದ್ದ ಉಪ ಚುನಾವಣೆಯಿಂದ ಹಿಡಿದು 2019ರವರೆಗೆ ಚುನಾವಣೆವರೆಗೂ ಈ ಕ್ಷೇತ್ರದಲ್ಲಿ ಬಿಜೆಪಿಯೇ ಗೆದ್ದಿದೆ. 2014 ಮತ್ತು 2019ರಲ್ಲಿ ಗೆದ್ದಿದ್ದ ಬಿಜೆಪಿ ಸಂಸದ 71 ವರ್ಷದ ದೀಪ್ಸಿನ್ಹಾ ಶಂಕರ್ಸಿನ್ಹಾ ರಾಥೋಡ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ.