ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಹಿಜಾಬ್ಗಾಗಿ ಕಾನೂನು ಹೋರಾಟ ನಡೆಸುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯದೆ ವಾಪಾಸಾಗಿದ್ದಾರೆಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಪರೀಕ್ಷೆಗೆ ಕೆಲವೇ ಕ್ಷಣಗಳು ಬಾಕಿ ಇರುವಂತೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಬಂದ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರಾದ ಅಲಿಯಾ ಅಸಾದಿ ಹಾಗೂ ರೇಶಮ್ ಹಿಜಾಬ್ ಪ್ರವೇಶ ಪತ್ರ ಪಡೆದುಕೊಂಡು ಪರೀಕ್ಷಾ ಕೇಂದ್ರವಾದ ವಿದ್ಯೋದಯ ಕಾಲೇಜಿಗೆ ಬಂದರು.
ಈ ಸಂದರ್ಭ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡಿದರು. ಆದರೆ ಪ್ರಾಂಶುಪಾಲರು ಅವಕಾಶ ನೀಡಲಿಲ್ಲ. ಪರೀಕ್ಷೆಗೆ ಹಾಜರಾಗುವ ಅವಧಿ ಮುಕ್ತಾಯವಾದ ಕೂಡಲೇ 10.45 ಕ್ಕೆ ಸಿಬ್ಬಂದಿ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಿದರು.
ಅಲಿಯಾ ಅಸಾದಿ ಹಾಗೂ ರೇಶಮ್ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದಕ್ಕೆ ಪರೀಕ್ಷೆ ಬರೆಯದೆ ಪರೀಕ್ಷಾ ಕೇಂದ್ರದಿಂದ ಹೊರ ನಡೆದರು.
ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಈ ಬಾರಿ ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದೆ. ಪ್ರಸಕ್ತ ಸಾಲು ಆರೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇನ್ನು ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಹಾಕಲಾಗಿದ್ದು, 200 ಮೀಟರ್ ನಿಷೇಧಾಜ್ಞೆ ಜಾರಿಯಾಗಿದೆ.