ಭಾರತವು ಇನ್ನೂ ಮೂಢ ನಂಬಿಕೆಗಳು ಮತ್ತು ಆಚರಣೆಗಳಿಂದ ಹೊರಬಂದಿಲ್ಲ, ದೂರ ಸರಿದಿಲ್ಲ. ಇದಕ್ಕೆ ಪುಷ್ಟಿ ನೀಡುವ ನಿದರ್ಶನ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಉನ್ನಾವೊದಲ್ಲಿ ವ್ಯಕ್ತಿಯೊಬ್ಬರು ಸ್ಥಳೀಯ ಅರ್ಚಕರ ಸಲಹೆಯ ಮೇರೆಗೆ ಜೀವಂತ ಸಮಾಧಿಗೆ ಯತ್ನಿಸಿ 6 ಅಡಿಗಳಷ್ಟು ಆಳದಲ್ಲಿ ತಮ್ಮನ್ನು ತಾವೇ ಹೂತುಕೊಂಡಿದ್ದರು. ನಂತರ ಮಾಹಿತಿ ದೊರೆತು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ವೀಡಿಯೊದಲ್ಲಿ, ಪೊಲೀಸರು ವ್ಯಕ್ತಿಯನ್ನು ಸಮಾಧಿ ಮಾಡಿದ ಮೇಲ್ಗಡೆ ಮಣ್ಣು ತುಂಬಿದ್ದ ಬಿದಿರಿನ ಹೊದಿಕೆಯನ್ನು ತೆಗೆದುಹಾಕುತ್ತಿರುವುದು ಕಂಡುಬಂದಿದೆ. ಯುವಕನನ್ನು ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿ ಎಂದು ಗುರುತಿಸಲಾಗಿದೆ. ನವರಾತ್ರಿ ಉತ್ಸವಗಳು ಪ್ರಾರಂಭವಾಗುವ ಒಂದು ದಿನ ಮೊದಲು ಸಮಾಧಿ ಮಾಡಿದರೆ ಜ್ಞಾನೋದಯವಾಗುತ್ತದೆ ಎಂದು ಪುರೋಹಿತರೊಬ್ಬರು ಯುವಕನಿಗೆ ಹೇಳಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ : ಸ್ಕಿಝೋಫ್ರೇನಿಯ (ಚಿತ್ತ ವಿಕಲತೆ)
ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿ ಅವರು ನವರಾತ್ರಿಯಂದು ಆರು ಅಡಿ ಆಳದ ಹೊಂಡದಲ್ಲಿ ಸಮಾಧಿ ಮಾಡಿಕೊಂಡಿದ್ದಾರೆ. ಆದರೆ, ಆತನ ತಂದೆ ವಿನೀತ್ ಗೋಸ್ವಾಮಿ ಕೂಡ ಮಗನ ಸಮಾಧಿ ಮಾಡಲು ಗುಂಡಿ ತೋಡುವಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ. ಶುಭಂ ಗೋಸ್ವಾಮಿ, ತಂದೆ ವಿನೀತ್ ಗೋಸ್ವಾಮಿ ಮತ್ತು ಪುರೋಹಿತರಾದ ಮುನ್ನಾಲಾಲ್ ಮತ್ತು ಶಿವಕೇಶ್ ದೀಕ್ಷಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿದ ನಂತರ ಘಟನೆಯಲ್ಲಿ ಭಾಗಿಯಾಗಿದ್ದ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ. ಭಾನುವಾರ ಸಂಜೆ ಯುವಕ ಸಮಧಿಯಾಗಲು 6 ಅಡಿ ಹೊಂಡ ಪ್ರವೇಶಿಸಿದ್ದ. ಮಾಹಿತಿ ತಿಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ : 18 ವರ್ಷ ಮೇಲ್ಪಟ್ಟ ಎಲ್ಲರೂ ಧರ್ಮದ ಆಯ್ಕೆಗೆ ಅರ್ಹರು:ಸುಪ್ರಿಂ ಕೋರ್ಟ್