ADVERTISEMENT
ಟೊಮೆಟೋ ದರ ಹೆಚ್ಚಳದ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಮಂಡಿಗಳಿಂದ ಟೊಮೆಟೋ ಖರೀದಿಸಿ ಸಾರ್ವಜನಿಕ ಬಳಕೆಗೆ ವಿತರಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಈ ಮೂಲಕ ಕೇಂದ್ರ ಸರ್ಕಾರ ಟೊಮೆಟೋ ದರ ನಿಯಂತ್ರಣಕ್ಕೆ ಮೊದಲ ಪ್ರಯತ್ನ ಮಾಡಿದೆ.
ಮೂರು ರಾಜ್ಯಗಳ ಮಂಡಿಯಿಂದ ಟೊಮೆಟೋ ಖರೀದಿಸುವಂತೆ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಫೆಡ್) ಮತ್ತು ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ (ಎನ್ಸಿಸಿಎಫ್)ಗೆ ಸೂಚಿಸಿದೆ.
ಮಂಡಿಗಳಿಂದ ಖರೀದಿಸುವ ಟೊಮೆಟೋವನ್ನು ಕಳೆದ 1 ತಿಂಗಳಿಂದ ಅತೀ ಹೆಚ್ಚು ಬೆಲೆ ಇರುವ ಪ್ರಮುಖ ಬಳಕೆ ಕೇಂದ್ರಗಳಲ್ಲಿ ಮಾರಾಟಗಾರರಿಗೆ ವಿತರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಬೆಲೆ ಏರಿಕೆ ಆಗಿರುವ ನಗರಗಳನ್ನು ಗುರುತಿಸಿ ಅಲ್ಲಿ ಪೂರೈಕೆ ಮಾಡುವಂತೆ ಹೇಳಲಾಗಿದೆ.
ಭಾರತದಲ್ಲಿ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಅತೀ ಹೆಚ್ಚು ಅಂದ್ರೆ ಶೇಕಡಾ 56ರಿಂದ 58ರಷ್ಟು ಟೊಮೆಟೋ ಉತ್ಪಾದನೆ ಆಗುತ್ತದೆ. ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳಲ್ಲಿ ಅತೀ ಹೆಚ್ಚು ಇಳುವರಿ ಮಾರುಕಟ್ಟೆಗೆ ಬರುತ್ತದೆ. ಜುಲೈನಿಂದ ಆಗಸ್ಟ್ ಮತ್ತು ಅಕ್ಟೋಬರ್ನಿಂದ ನವೆಂಬರ್ ಕಡಿಮೆ ಇಳುವರಿ ಬರುವ ಸಮಯ.
ಮುಂಗಾರು ಮಳೆ, ಸಾಗಾಟದ ವೇಳೆ ಆಗುವ ನಷ್ಟ, ತಾತ್ಕಾಲಿಕವಾಗಿ ಟೊಮೆಟೋ ಪೂರೈಕೆಯಲ್ಲಿ ಆಗುವ ವ್ಯತ್ಯಯದಿಂದ ಟೊಮೆಟೋ ದರ ದಿಢೀರ್ ಹೆಚ್ಚಳ ಆಗುತ್ತದೆ ಎಂದು ಸರ್ಕಾರ ಹೇಳಿದೆ.
ಮಹಾರಾಷ್ಟ್ರ, ಆಂಧ್ರ, ಮಧ್ಯಪ್ರದೇಶದಿಂದ ಆಗಸ್ಟ್ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೋ ಮಾರುಕಟ್ಟೆಗೆ ಬರಲಿರುವ ಆಗಸ್ಟ್ ವೇಳೆಗೆ ಟೊಮೆಟೋ ದರ ಇಳಿಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ADVERTISEMENT