ಗೋಧಿ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಮತ್ತು ಸಕ್ಕರೆ ರಫ್ತಿನ ಮೇಲಿನ ನಿರ್ಬಂಧದ ಬಳಿಕ ಈಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹತ್ತಿ ಮತ್ತು ಅಕ್ಕಿ ರಫ್ತಿನ ಮೇಲೂ ನಿರ್ಬಂಧ ಹೇರುವ ಸಾಧ್ಯತೆಗಳಿವೆ.
ಕಚ್ಚಾ ಹತ್ತಿಯ ಬೆಲೆ ಎರಡೂವರೆ ಪಟ್ಟು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಜವಳಿ ಕಾರ್ಖಾನೆಗಳ ಮಾಲೀಕರು ಹತ್ತಿ ರಫ್ತಿನ ಮೇಲೆ ನಿಷೇಧ ಹೇರಿ ಕೈಗಾರಿಕೆಯ ಹಿತಾಸಕ್ತಿ ಕಾಪಾಡುವಂತೆಯೂ ಇಲ್ಲವಾದಲ್ಲಿ ಬಟ್ಟೆ ಉತ್ಪಾದನೆಯನ್ನೇ ನಿಲ್ಲಿಸಬೇಕಾಗುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದ್ದರು.
2020ರಲ್ಲಿ 40 ಸಾವಿರ ರೂಪಾಯಿ ಇದ್ದ ಒಂದು ಕ್ಯಾಂಡಿ (ಅಂದರೆ 356 ಕೆಜಿ) ಹತ್ತಿಯ ಬೆಲೆ 2022ರಲ್ಲಿ ಅಂದರೆ ಈ ವರ್ಷ 1 ಲಕ್ಷ ರೂಪಾಯಿಗೆ ಏರಿದೆ. ಅಂದರೆ ಎರಡೂವರೆ ಪಟ್ಟು ಹೆಚ್ಚಳ ಕಂಡಿದೆ.
2020ರಲ್ಲಿ 244 ರೂಪಾಯಿ ಇದ್ದ ಒಂದು ಕೆಜಿ ಹತ್ತಿ ನೂಲಿನ ಬೆಲೆ 2022ರಲ್ಲಿ ಅಂದರೆ ಈ ವರ್ಷ ಕೆಜಿಗೆ 481 ರೂಪಾಯಿಗೆ ಏರಿದೆ. ಅಂದರೆ ಎರಡು ಪಟ್ಟು ಹೆಚ್ಚಳವಾಗಿದೆ.
ಗಾರ್ಮೆಂಟ್ಸ್ ಉದ್ಯಮ ದೇಶದಲ್ಲಿ ಅತೀ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಗಳಲ್ಲಿ ಒಂದು.
ಅಕ್ಕಿ ರಫ್ತಿನ ಮೇಲೂ ನಿರ್ಬಂಧ..?
ಆಹಾರೋತ್ಪನ್ನಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಹಣದುಬ್ಬರ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ತಡೆಗೆ ರಫ್ತು ನಿರ್ಬಂಧದ ಕ್ರಮಗಳಿಗೆ ಪ್ರಧಾನಿ ಮೋದಿ ಸರ್ಕಾರ ಮೊರೆ ಹೋಗುತ್ತಿದೆ.
ಈ ವರ್ಷದ ಜೂನ್ನಿಂದ ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೆ ಕೇಂದ್ರ ಸರ್ಕಾರ ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ರಾಜ್ಯಗಳಿಗೆ ಗೋಧಿಗಿಂತಲೂ 60 ಲಕ್ಷ ಟನ್ ಅಧಿಕ ಅಕ್ಕಿಯನ್ನು ಪೂರೈಕೆ ಮಾಡಬೇಕಾಗುತ್ತದೆ.
2014ರಿಂದ ಬಾಸ್ಮತಿಯೇತರ ಅಕ್ಕಿಯ ರಫ್ತು ದ್ವಿಗುಣಗೊಂಡಿದೆ. ವರ್ಷಕ್ಕೆ ಭಾರತ 6.11 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಅಕ್ಕಿಯನ್ನು ರಫ್ತು ಮಾಡುತ್ತಿದೆ. 2021ರ ಆರ್ಥಿಕ ವರ್ಷದಲ್ಲಿ ಬಾಸ್ಮತಿಯೇತರ ಅಕ್ಕಿಯ ರಫ್ತು ಕೃಷಿ ಉತ್ಪನ್ನಗಳ ರಫ್ತಿನಿಂದಾಗುವ ಬರುವ ವಿದೇಶಿ ವಿನಿಮಯ ಆದಾಯದ ಮೊದಲ ಸ್ಥಾನದಲ್ಲಿತ್ತು.