ADVERTISEMENT
ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿರುವ ಮಾತಿನ ವೀಡಿಯೋ ಎಡಿಟೆಡ್ ವೀಡಿಯೋ ಅಥವಾ ತಿರುಚಿದ ವೀಡಿಯೋ ಅಲ್ಲ.
ಡಿಸೆಂಬರ್ 17ರಂದು ರಾಜ್ಯಸಭೆಯಲ್ಲಿ ಸಂವಿಧಾನಕ್ಕೆ 75 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಡಿದ ಭಾಷಣದಲ್ಲಿ ʻಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್ ಎಂದು ಹೇಳುವುದು ಈಗ ಶೋಕಿಯಾಗಿದೆ. ಒಂದು ವೇಳೆ ಇಷ್ಟೊಂದು ಬಾರಿ ದೇವರ ನಾಮವನ್ನು ಜಪಿಸಿದ್ದರೆ ಏಳೇಳೂ ಜನ್ಮಕ್ಕೂ ಸ್ವರ್ಗವೇ ಪ್ರಾಪ್ತಿಯಾಗ್ತಿತ್ತುʼ ಎಂದು ಅಂಬೇಡ್ಕರ್ ಬಗ್ಗೆ ಸಂಸತ್ತಿನ ಮೇಲ್ಮನೆಯಲ್ಲೇ ಲೇವಡಿ ಮಾಡಿದ್ದರು.
ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಬಗ್ಗೆ ಆಡಿದ ಮಾತು ಕಟು ಟೀಕೆಗಳಿಗೆ ಗುರಿಯಾದ ಬಳಿಕ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯಾಗಿ, ಕರ್ನಾಟಕದ ಬಿಜೆಪಿ ನಾಯಕರು ಒಳಗೊಂಡಂತೆ ಎಲ್ಲ ಬಿಜೆಪಿ ನಾಯಕರು ʻಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಆಡಿದ ಮಾತನ್ನು ತಿರುಚಲಾಗಿದೆ, ಎಡಿಟ್ ಮಾಡಲಾಗಿದೆ, ಇದು ಕಾಂಗ್ರೆಸ್ ಹಬ್ಬಿಸುತ್ತಿರುವ ಸುಳ್ಳುʼ ಎಂದು ಸಮರ್ಥನೆ ಮಾಡಿಕೊಳ್ಳುವ, ಆ ಮೂಲಕ ಬಚಾವ್ ಆಗುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಸಂಜೆ ತುರ್ತು ಮಾಧ್ಯಮಗೋಷ್ಠಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದೂ ತಾವು ಆಡಿರುವ ಮಾತನ್ನು ಸಂಪೂರ್ಣ ತೋರಿಸುವಂತೆಯೂ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ತಮ್ಮ ಆಪ್ತನ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರೇ ʻಇದು ಕಾಂಗ್ರೆಸ್ ಹಬ್ಬಿಸಿರುವ ಸುಳ್ಳುʼ ಎಂದು ಟ್ವೀಟ್ ಮಾಡಿ ಸಮರ್ಥನೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಟೀಕೆಗಳಿಗೆ, ಆರೋಪಗಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಇದುವರೆಗೆ ಉತ್ತರ ಕೊಡದ ಪ್ರಧಾನಿ ಮೋದಿಗೆ ತಮ್ಮ ಆಪ್ತ ಅಮಿತ್ ಶಾ ಅಂಬೇಡ್ಕರ್ ಅವರ ಬಗ್ಗೆ ಆಡಿರುವ ಮಾತೇ ತಲೆನೋವಾಗಿದೆ.
ಹಾಗಾದ್ರೆ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಮಾಡಿರುವ ಭಾಷಣದ ವೀಡಿಯೋ ಅಸಲಿಯೋ ಅಥವಾ ಅದನ್ನು ತಿರುಚಲಾಗಿದೆ.
ಸಂಸತ್ ಟಿವಿ ನಿನ್ನೆ ಅಂದರೆ ಡಿಸೆಂಬರ್ 17ರಂದು RS | Amit Shah’s Remarks | Discussion on Journey of 75 Years of Constitution of India ಟೈಟಲ್ ಹೆಸರಲ್ಲಿ 1 ಗಂಟೆ 32 ನಿಮಿಷ 2 ಸೆಕೆಂಡ್ಗಳ ದೀರ್ಘವಾದ ವೀಡಿಯೋವನ್ನು ಅಪ್ಲೋಡ್ ಮಾಡಿದೆ.
ಆ ವೀಡಿಯೋದ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಬಹುದು.
ಹರಿಯಾಣ ವಿಧಾನಸಭೆಯಿಂದ ಆಯ್ಕೆಯಾಗಿರುವ ಸ್ವತಂತ್ರ ರಾಜ್ಯಸಭಾ ಸಂಸದ ಕಾರ್ತಿಕೇಯ ಶರ್ಮಾ ಭಾಷಣ ಆ ವೀಡಿಯೋದಲ್ಲಿ 5 ಸೆಕೆಂಡ್ಗೆ ಕೊನೆಯಾಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣಕ್ಕೆ ಎದ್ದು ನಿಂತ ಬಳಿಕ ಬಿಜೆಪಿ ಸಂಸದರು ಮೇಜುಕುಟ್ಟಿ ಸ್ವಾಗತಿಸಿದ ಬಳಿಕ 18ನೇ ಸೆಕೆಂಡ್ಗೆ ಶಾ ಅವರ ಭಾಷಣ ಆರಂಭವಾಗುತ್ತದೆ.
ಬಿಜೆಪಿ ರಾಜ್ಯಗಳಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿ ಮಾಡುವ ಬಗ್ಗೆ ಅಮಿತ್ ಶಾ ಅವರು ಆಡಿದ ಮಾತು 1 ಗಂಟೆ 07 ನಿಮಿಷ 44 ಸೆಕೆಂಡ್ಗೆ ಕೊನೆಯಾಗುತ್ತದೆ.
ಈ ಮಾತಿನ ಮರುಕ್ಷಣವೇ 1 ಗಂಟೆ 07 ನಿಮಿಷ 45 ಸೆಕೆಂಡ್ಗೆ ʻಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್ ಎಂದು ಹೇಳುವುದು ಈಗ ಶೋಕಿಯಾಗಿದೆ. ಒಂದು ವೇಳೆ ಇಷ್ಟೊಂದು ಬಾರಿ ದೇವರ ನಾಮವನ್ನು ಜಪಿಸಿದ್ದರೆ ಏಳೇಳೂ ಜನ್ಮಕ್ಕೂ ಸ್ವರ್ಗವೇ ಪ್ರಾಪ್ತಿಯಾಗ್ತಿತ್ತುʼ ಎಂಬ ಹೇಳಿಕೆಯನ್ನು ಕೊಡ್ತಾರೆ. ಈ ಬಗ್ಗೆ 1 ಗಂಟೆ 8 ನಿಮಿಷ 10 ಸೆಕೆಂಡ್ವರೆಗೂ ಅಮಿತ್ ಶಾ ಮಾಡ್ತಾರೆ. ಅಮಿತ್ ಶಾ ಈ ಭಾಷಣವನ್ನು ಮಾಡುವ ವೇಳೆ ಸಮಯ ಸಂಜೆ 7 ಗಂಟೆ 45 ನಿಮಿಷ ಆಗಿರುತ್ತದೆ.
ಅಂಬೇಡ್ಕರ್ ಕುರಿತು ಅಮಿತ್ ಶಾ ಆಡಿದ ಆ ಮಾತು ಅದು ಅವರ ಸ್ವಂತ ಮಾತೇ ಆಗಿತ್ತು.
ʻಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್ ಎಂದು ಹೇಳುವುದು ಈಗ ಶೋಕಿಯಾಗಿದೆ. ಒಂದು ವೇಳೆ ಇಷ್ಟೊಂದು ಬಾರಿ ದೇವರ ನಾಮವನ್ನು ಜಪಿಸಿದ್ದರೆ ಏಳೇಳೂ ಜನ್ಮಕ್ಕೂ ಸ್ವರ್ಗವೇ ಪ್ರಾಪ್ತಿಯಾಗ್ತಿತ್ತುʼ ಎಂಬ ಶಾ ಹೇಳಿಕೆ ಯಾರೋ ಬೇರೊಬ್ಬರು ಕೊಟ್ಟ ಹೇಳಿಕೆಯೇ ಅಲ್ಲ, ಅದು ಸ್ವತಃ ಅಮಿತ್ ಶಾ ಅವರದ್ದೇ ಹೇಳಿಕೆ.
ಅಂದರೆ ಅಮಿತ್ ಶಾ ಅವರು ಉದ್ದೇಶಪೂರ್ವಕವಾಗಿ ಅಂಬೇಡ್ಕರ್ ವಿರುದ್ಧ ತಮ್ಮದೇ ಸ್ವಂತ ಹೇಳಿಕೆಯನ್ನು ನೀಡುವುದು ಸ್ಪಷ್ಟವಾಗುತ್ತದೆ. ಶಾ ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ್ದ ಅನ್ಯಾಯಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ ನಿಜ. ಆದರೆ ʻಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್..ಅಂಬೇಡ್ಕರ್ ಎಂದು ಹೇಳುವುದು ಈಗ ಶೋಕಿಯಾಗಿದೆ. ಒಂದು ವೇಳೆ ಇಷ್ಟೊಂದು ಬಾರಿ ದೇವರ ನಾಮವನ್ನು ಜಪಿಸಿದ್ದರೆ ಏಳೇಳೂ ಜನ್ಮಕ್ಕೂ ಸ್ವರ್ಗವೇ ಪ್ರಾಪ್ತಿಯಾಗ್ತಿತ್ತುʼ ಎಂಬ ಹೇಳಿಕೆ ಅಮಿತ್ ಶಾ ಅವರ ಸ್ವಯಂ ಸೃಷ್ಟಿಯೇ ಹೊರತು ಬೇರೆ ಯಾರದ್ದೋ ಹೇಳಿಕೆಯಲ್ಲ.
ಅಂದರೆ ಶಾ ಕುರಿತಾದ ಆ ವೀಡಿಯೋ ನಕಲಿ, ತಿರುಚಿದ ವೀಡಿಯೋ ಎಂಬ ಬಿಜೆಪಿ ಹೇಳಿಕೆಯೇ ಸುಳ್ಳು.
ADVERTISEMENT