ಉತ್ತರಪ್ರದೇಶದಲ್ಲಿ ರೈತರ ಮೇಲೆ ಜೀಪ್ ಹತ್ತಿಸಿ ರೈತರ ಕೊಲೆಗೆ ಕಾರಣರಾಗಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
ಪೊಲೀಸರ ಎದುರು ಶರಣಾಗುವಂತೆ ಆಶಿಶ್ ಮಿಶ್ರಾಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಆಶಿಶ್ ಮಿಶ್ರಾಗೆ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಅನೂರ್ಜಿತಗೊಳಿಸಿದೆ. ಸಂಬಂಧಪಡದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಮತ್ತು ನೊಂದವರ ವಾದ ಆಲಿಸುವ ಹಕ್ಕನ್ನು ಪರಿಗಣಿಸದೇ ಜಾಮೀನು ಮಂಜೂರು ಮಾಡಲಾಗಿತ್ತು ಎಂದು ಹೇಳಿ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
`ನೊಂದವರ ವಾದ ಆಲಿಸುವುದಕ್ಕೆ ನಿರಾಕರಿಸಿರುವುದು ಮತ್ತು ಜಾಮೀನು ಮಂಜೂರು ಮಾಡುವುದಕ್ಕೆ ಹೈಕೋರ್ಟ್ ತೋರಿದ ಆತುರ ಜಾಮೀನು ರದ್ದುಪಡಿಸುವುದಕ್ಕೆ ಪೂರಕವಾಗಿವೆ. ಈ ಜಾಮೀನನ್ನು ರದ್ದುಪಡಿಸಬೇಕಾಗುತ್ತದೆ’ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠ ಆದೇಶದಲ್ಲಿ ತಿಳಿಸಿದೆ.