ಇದು ಕೇಂದ್ರ ಸರ್ಕಾರವೋ? ಅಥವಾ ಭಾರತ ಒಕ್ಕೂಟವೋ? ಈ ಪ್ರಶ್ನೆಯನ್ನು ಇತೀಚಿಗಷ್ಟೇ ಸಂಸತ್ ನಲ್ಲಿ ರಾಹುಲ್ ಗಾಂಧಿ ಎತ್ತಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೂಡಾ ಇದೆ ಮಾದರಿಯ ಪ್ರಶ್ನೆ ಕೇಳಿದ್ದರು. ಇದೀಗ ಒಕ್ಕೂಟ ಭಾರತ ಎಂಬ ಪರಿಕಲ್ಪನೆಗೆ ಬಲ ಸಿಕ್ಕಿದೆ.
ಬಿಜೆಪಿಯ ಹಿರಿಯ ನಾಯಕ, ರಾಜ್ಯಸಭಾ ಸದಸ್ಯರಾದ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ, ಒಕ್ಕೂಟ ಭಾರತ ಪರ ಬ್ಯಾಟಿಂಗ್ ಮಾಡಿದೆ.
ಸಿಬ್ಬಂದಿ, ಸಾರ್ವಜನಿಕ ಸೇವೆ ಮತ್ತು ಕಾನೂನು ವಿಚಾರಗಳಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಗುರುವಾರ ಮಂದಿಸಿದ ಇಲಾಖಾ ಅನುದಾನ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದೆ
ಕೇಂದ್ರ ಸರ್ಕಾರಿ ನೌಕರನನ್ನು ಹೇಗೆ ಗುರುತಿಸಬೇಕು ಎಂಬ ಸ್ವಯಂ ಪ್ರಶ್ನೆಗೆ, ಕೇಂದ್ರ ಸರ್ಕಾರಿ ನೌಕರ ಎಂದು ಕರೆಯುವುದು ಸಮಂಜಸವಲ್ಲ. ಬದಲಿಗೆ ನ್ಯಾಯಾ0ಗ, ಕಾರ್ಯಾ0ಗ, ಶಾಸಕಾಂಗದ ಅಧಿಕಾರಿಗಳನ್ನು ಭಾರತ ಒಕ್ಕೂಟದ ಅಧಿಕಾರಿಗಳು ಎಂದು ಕರೆಯಬೇಕು ಎಂದು ಶಿಫಾರಸು ಮಾಡಿದೆ.
ಆದರೆ, ಭಾರತ ಒಕ್ಕೂಟ ಎಂಬ ವಾದಕ್ಕೆ ಬಲ ತುಂಬಿದ ಈ ಸಂಸದೀಯ ಸ್ಥಾಯಿ ಸಮಿತಿ ತುಂಬಾ ಸ್ಪಷ್ಟವಾಗಿ ತನ್ನ ಪರಿಧಿಯನ್ನು ಮೀರಿದೆ ಎಂದು ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದೀಯ ಸ್ಥಾಯಿ ಸಮಿತಿ, ಇದು ಸ್ಪಷ್ಟವಾಗಿ ಸಮಿತಿಯ ಮಿತಿಯಲ್ಲಿಯೇ ನೀಡಿದ ಶಿಫಾರಸು. ಸಮಿತಿ ಸದಸ್ಯರ ಮನಸ್ಸಾಕ್ಷಿಗೆ ಅನುಗುಣವಾಗಿ, ಸಂವಿಧಾನ, ಸಮಿತಿಯ ವ್ಯಾಪ್ತಿಗೆ ಅನುಗುಣವಾಗಿಯೇ ಮಾಡಿದ ಶಿಫಾರಸು ಇದು ತುಂಬಾ ಸ್ಪಷ್ಟವಾಗಿ ತಿಳಿಸಿದೆ.