ತನ್ನ ಮೊಬೈಲ್ ಕೇಳಿದ ಕಾರಣಕ್ಕೆ ಪತಿಯ ಕಣ್ಣಿಗೆ ಪತ್ನಿಯು ಕತ್ತರಿಯಿಂದ ಚುಚ್ಚಿ ದಾಳಿ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಬಾಘ್ಪಾಟ್ ಪ್ರದೇಶದ ನಿವಾಸಿ ಅಂಕಿತ್ ಪತ್ನಿಯಿಂದ ದಾಳಿಗೊಳಗಾದ ವ್ಯಕ್ತಿಯಾಗಿದ್ದಾನೆ.ತನ್ನ ಪತ್ನಿ ಪ್ರಿಯಾಂಕಾ ಮೊಬೈಲ್ ನಲ್ಲಿ ಹಾಡು ಕೇಳುವ ಸಲುವಾಗಿ ಅಂಕಿತ್ ಆಕೆಯ ಮೊಬೈಲ್ ಕೊಡುವಂತೆ ತಿಳಿಸಿದ್ದಾನೆ. ಆದರೆ ಪ್ರಿಯಾಂಕಾ ತಾನು ಮೊಬೈಲ್ ಕೊಡುವುದಕ್ಕೆ ನಿರಾಕರಿಸಿದ್ದಾಳೆ. ಈ ವೇಳೆ ಅಂಕಿತ್-ಪ್ರಿಯಾಂಕಾ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ದಂಪತಿಯ ಈ ಜಗಳ ತಾರಕಕ್ಕೇರಿ ಪ್ರಿಯಾಂಕಾ, ಅಂಕಿತ್ ಕಣ್ಣಿಗೆ ಕೈಗೆ ಸಿಕ್ಕ ಕತ್ತರಿಯಿಂದ ಚುಚ್ಚಿದ್ದಾಳೆ.
ಕೂಡಲೇ ನೆರೆಹೊರೆಯವರು ಅಂಕಿತ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕತ್ತರಿ ದಾಳಿಯಿಂದಾಗಿ ಆತನ ಕಣ್ಣಿಗೆ ತೀವ್ರ ಪೆಟ್ಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪ್ರಿಯಾಂಕಾಳನ್ನು ವಶಕ್ಕೆ ಪಡೆದು ಘಟನೆ ಕುರಿತಾಗಿ ತನಿಖೆ ಕೈಗೊಂಡಿದ್ದಾರೆ.