ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಪೋಟವಾಗಿ ಬೆಂಕಿ ಹೊತ್ತಿಕೊಂಡಿದ್ದು, ಈ ಘಟನೆಯಲ್ಲಿ 9 ಜನ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಹಾಗೂ ಅಗ್ನಿ ಶಾಮಕದಳ ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ರಾಜಧಾನಿ ನವದೆಹಲಿಯಿಂದ 60 ಕಿಲೋಮೀಟರ್ ದೂರದಲ್ಲಿರುವ ಉತ್ತರಪ್ರದೇಶದ ಧೌಲಾನಾದಲ್ಲಿನ ಕೈಗಾರಿಕಾ ಘಟಕದಲ್ಲಿ ಬಾಯ್ಲರ್ ಸ್ಫೋಟಗೊಂಡು ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ ಎಂದು ಪೊಲೀಸ್ ವಕ್ತಾರ ಸುರೇಂದ್ರ ಸಿಂಗ್ ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ 9 ಜನ ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಾಪುರ್ ಜಿಲ್ಲಾಧಿಕಾರಿ ಮೇಧಾ ರೂಪಮ್ ತಿಳಿಸಿದ್ದಾರೆ.
ಕೆಮಿಕಲ್ ಫ್ಯಾಕ್ಟರಿಯಲ್ಲಿನ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಈಗಾಗಲೇ ಅಗ್ನಿ ಶಾಮಕ ಸಿಬ್ಬಂದಿ ಆರಂಭಿಸಿದ್ದಾರೆ.
ಕೆಮಿಕಲ್ ಫ್ಯಾಕ್ಟರಿಯಲ್ಲಿ ಈ ಸ್ಪೋಟಕ್ಕೆ ಸುತ್ತಮುತ್ತಲಿನ ಫ್ಯಾಕ್ಟರಿಗಳ ಮೇಲ್ಚಾವಣಿ ಕುಸಿತಗೊಂಡಿವೆ. ಈ ಬೆಂಕಿಯ ಜ್ವಾಲೆ ನಿಯಂತ್ರಿಸಲು ಅಗ್ನಿ ಶಾಮಕ ದಳಕ್ಕೆ ಬರೋಬ್ಬರಿ 3 ಗಂಟೆಗಳ ಸಮಯ ಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಫ್ಯಾಕ್ಟರಿಯಲ್ಲಿ 9 ಜನ ಸಾವನ್ನಪ್ಪಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಕಂಬನಿ ಮಿಡಿದಿದ್ದಾರೆ.
ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಹಾಗೂ ಮೃತರ ಕುಟುಂಬಕ್ಕೆ ಸಾಧ್ಯವಾದಷ್ಟು ಸಹಾಯ ಮಾಡಲು ಯೋಗಿ ಆದಿತ್ಯನಾಥ್ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.