ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಬಳಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಓರ್ವ ವ್ಯಕ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯಾದ್ಯಂತ ಹಲವು ಮರಗಳು ಧರೆಗುರುಳಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ.
ಹಳಿಯಾಳ ಮೂಲದ ಮಂಜುನಾಥ ಮೋರೆ ಎಂಬಾತ ಸಾತ್ನಳ್ಳಿ ಕೆರೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರದ ಹಳಿಯಾಳದಿಂದ ದಕ್ಷಿಣದ ಭಟ್ಕಳದವರೆಗೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗಿದೆ. ಈ ಮಧ್ಯೆ ಭಾರೀ ಮಳೆಯಿಂದಾಗಿ ಆರು ಮನೆಗಳು ಸಂಪೂರ್ಣ ಮತ್ತು 49 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹೊನ್ನಾವರದಲ್ಲಿ ಬೃಹತ್ ಮರ ಬಿದ್ದು ಒಂದು ಮನೆಗೆ ಹಾನಿಯಾಗಿದೆ. ಜನರು ತಮ್ಮ ವಸ್ತುಗಳನ್ನು ಸಂಗ್ರಹಿಸುವುದು, ಗಾಯಾಳುಗಳನ್ನು ಹೊತ್ತುಕೊಂಡು ಹೋಗುವುದು ಕೆಲವೆಡೆ ಕಂಡು ಬಂದಿದೆ.
ಯಲ್ಲಾಪುರದಲ್ಲಿ ಭಾರೀ ಮಳೆಯಾಗಿದ್ದು, ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತಗೊಂಡಿವೆ. ಅರಬೈಲ್ ಘಾಟ್ಗೆ ಸಮೀಪವಿರುವ ಅರ್ಥಿಬೈಲ್ನಲ್ಲಿ ಟ್ಯಾಂಕರ್ ಒಂದು ಉರುಳಿ ಬಿದಿದ್ದೆ. ಇದರಿಂದಾಗಿ ಘಾಟ್ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆದರೂ ಸಂಜೆ ವೇಳೆಗೆ ಟ್ಯಾಂಕರ್ ತೆರವುಗೊಳಿಸಿ ಸಂಚಾರ ಮುಂದುವರಿಸಲಾಯಿತು.
ಹವಾಮಾನ ಮುನ್ಸೂಚನೆಯಂತೆ ಇನ್ನೂ ಮೂರು ದಿನಗಳ ಕಾಲ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ, ಡಿಸಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ಹೆಚ್ಚಿನ ಹಾನಿಯನ್ನು ನಿರೀಕ್ಷಿಸುತ್ತಿರುವ ನಾವು ಯಾವುದೇ ಘಟನೆಗಳನ್ನು ಎದುರಿಸಲು ಸಜ್ಜಾಗಿದ್ದೇವೆ” ಎಂದು ಅವರು ಹೇಳಿದರು.