ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ನಿವೃತ್ತಿ ಘೋಷಿಸುವ ಸುಳಿವು ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಬಿಜೆಪಿ ರಾಷ್ಟ್ರೀಯ ನಾಯಕರು ಟಿಕೆಟ್ ನಿರಾಕರಿಸುವುದಕ್ಕೂ ಮೊದಲೇ ಪಕ್ಷದ ಕೆಲ ಸಂಸದರು ತಾವಾಗಿಯೇ ನಿವೃತ್ತಿಯ ಸುಳಿವನ್ನು ನೀಡುತ್ತಿದ್ದಾರೆ. ಈಗ ಅನಂತ್ಕುಮಾರ್ ಹೆಗಡೆ ಸರದಿ.
ಶಿರಸಿಯಲ್ಲಿರುವ ತಮ್ಮ ಮನೆಯಲ್ಲಿ ತಮ್ಮನ್ನು ಭೇಟಿಯಾದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಮುಂದಿನ ಬಾರಿಯೂ ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಮಾಡಿದ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಹೆಗಡೆ,
ಆರು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ, ನನಗೆ ಇನ್ನೇನು ಬೇಕು..? ರಾಜಕೀಯದಿಂದ ದೂರ ಆಗಬೇಕು ಎಂದು ಕಳೆದ ಮೂರು ಅವಧಿಯಿಂದ ಹೇಳಿಕೊಂಡು ಬಂದಿದ್ದೇನೆ. ಜನ ನನ್ನನ್ನು ತಿರಸ್ಕರಿಸಿ ಹೊಸಬರ ಹೆಸರು ಹೇಳಲಿ ಎಂದು ಮೂರು ವರ್ಷಗಳಿಂದ ಸಾರ್ವಜನಿಕರ ಭೇಟಿ ಸಹ ಮಾಡಿರಲಿಲ್ಲ. ನಾನೇ ಮತ್ತೆ ಮತ್ತೆ ಸ್ಪರ್ಧೆ ಮಾಡುವುದನ್ನು ಭಗವಂತನೂ ಒಪ್ಪುವುದಿಲ್ಲ. ಜಿಲ್ಲೆಯಲ್ಲಿ ಸಾಮರ್ಥ್ಯ ಉಳ್ಳವರು, ಆಕಾಂಕ್ಷಿತರು ಜಾಸ್ತಿ ಇದ್ದಾರೆ. ಅವರಿಗೂ ಅವಕಾಶ ಸಿಗಬೇಕು.
ನಾನು ನಿಲ್ಲುತ್ತೇನೆ ಎಂದಾದರೆ ವಿರೋಧ ಮಾಡುವವರು ಯಾರೂ ಇಲ್ಲ. ಆದರೆ ನಾನೇ ತುಂಬಾ ದಿನಗಳಿಂದ ರಾಜಕೀಯದಿಂದ ದೂರ ಆಗಬೇಕು ಎಂದು ನಿರ್ಣಯ ಮಾಡಿದ್ದೇನೆ, ಪಕ್ಷದ ಹಿರಿಯರಿಗೂ ಹೇಳಿದ್ದೇನೆ.
ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಾನು ಖಂಡಿತ ತಲೆಬಾಗುತ್ತೇನೆ. ಈ ಪ್ರೀತಿ, ವಿಶ್ವಾಸವನ್ನು ತಿರಸ್ಕರಿಸುವಂತ ಮೂರ್ಖತನವನ್ನು ಭಗವಂತ ನನಗೆ ನೀಡದಿರಲಿ
ಎಂದು ಕಾರ್ಯಕರ್ತರು ಮತ್ತು ಮುಖಂಡರಿಗೆ ಪ್ರತಿಕ್ರಿಯಿಸಿದರು.
ಈಗಾಗಲೇ ಮಾಜಿ ಕೇಂದ್ರ ಸಚಿವ, ಬೆಂಗಳೂರು ಉತ್ತರ ಲೋಕಸಭಾ ಸಂಸದ ಡಿ ವಿ ಸದಾನಂದ ಗೌಡ, ಚಿಕ್ಕಬಳ್ಳಾಪುರ ಸಂಸದ ಬಿ ಎನ್ ಬಚ್ಚೇಗೌಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಘೋಷಿಸಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ, ಕೇಂದ್ರ ಸಚಿವ ನಾರಾಯಣಸ್ವಾಮಿ, ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ ಕೂಡಾ ಚುನಾವಣಾ ನಿವೃತ್ತಿಯ ಸುಳಿವು ನೀಡಿದ್ದಾರೆ.
1996ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಅನಂತ್ಕುಮಾರ್ ಹೆಗಡೆ 1998, 2004, 2009, 2014,2019ರಲ್ಲಿ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 2017ರಿಂದ 2019ರವರೆಗೆ ಪ್ರಧಾನಿ ಮೋದಿ ಸರ್ಕಾರದಲ್ಲಿ ಕೌಶಲ್ಯಾಭಿವೃದ್ಧಿ ಸಚಿವರೂ ಆಗಿದ್ದರು.
ADVERTISEMENT
ADVERTISEMENT