ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಷ್ಠಿತ ಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರ. 2013ರಲ್ಲಿ ಸಿದ್ದರಾಮಯ್ಯನವರು ಈ ಕ್ಷೇತ್ರದಿಂದಲೇ ಗೆದ್ದು ಮುಖ್ಯಮಂತ್ರಿ ಆದ ಕಾರಣ ಈ ಕ್ಷೇತ್ರವನ್ನು ಸಿದ್ದರಾಮಯ್ಯನವರ ಅದೃಷ್ಟ ಕ್ಷೇತ್ರ ಎಂದೂ ಕರೆಯಲಾಗುತ್ತದೆ. ಈ ಬಾರಿ ಸಚಿವ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿರುವ ಕಾರಣ ಈ ಕ್ಷೇತ್ರ ಉಳಿದೆಲ್ಲ ಕ್ಷೇತ್ರಕ್ಕಿಂತಲೂ ಪ್ರತಿಷ್ಠೆಯ ಕ್ಷೇತ್ರವಾಗಿದೆ.
ಜಾತಿ ಲೆಕ್ಕಾಚಾರ:
ಈ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ 60 ಸಾವಿರ ಮತಗಳಿವೆ. ಕುರುಬ ಸಮುದಾಯದ 42 ಸಾವಿರ, ಉಪ್ಪಾರ 25 ಸಾವಿರ, ಪರಿಶಿಷ್ಟ ಜಾತಿ 35 ಮತ್ತು ಪರಿಶಿಷ್ಟ ಪಂಗಡದ 20 ಸಾವಿರ, ಮುಸಲ್ಮಾನ ಸಮುದಾಯದ 15 ಸಾವಿರ ಮತ್ತು ಇತರೆ ಸಮುದಾಯಗಳ 40 ಸಾವಿರ ಮತಗಳಿವೆ.
ಯಾರು ಗೆಲ್ಲಬಹುದು..?
ನಮ್ಮ ಸಮೀಕ್ಷೆ ಪ್ರಕಾರ ವರುಣಾದಲ್ಲಿ ಸಿದ್ದರಾಮಯ್ಯನವರೇ ಗೆಲ್ಲಲಿದ್ದಾರೆ, ವಿ ಸೋಮಣ್ಣ ಸೋಲಲಿದ್ದಾರೆ. ನಮ್ಮ ಸಮೀಕ್ಷೆ ಪ್ರಕಾರ ಸಿದ್ದರಾಮಯ್ಯ ಅವರು 25ರಿಂದ 30 ಸಾವಿರ ಮತಗಳಿಂದ ಗೆಲ್ಲಬಹುದು. ಆದರೆ ಕಾಂಗ್ರೆಸ್ ಲೆಕ್ಕಾಚಾರದ ಪ್ರಕಾರ 50 ಸಾವಿರ ಅಂತರದಲ್ಲಿ ಸಿದ್ದರಾಮಯ್ಯ ಗೆಲ್ಲಬಹುದು.
ಕಾರಣಗಳು:
1. ಸಚಿವ ಸೋಮಣ್ಣ ಕ್ಷೇತ್ರಕ್ಕೆ ಹೊರಗಿನವರು
2. ಸೋಮಣ್ಣ ಅವರನ್ನು ಸೋಲಿಸಲೆಂದೇ ಹರಕೆ ಕುರಿ ರೂಪದಲ್ಲಿ ಬಿಜೆಪಿ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ ಎಂಬ ಅಭಿಪ್ರಾಯ
3. ವರುಣಾ ಕ್ಷೇತ್ರಕ್ಕೆ ಸಂಬಂಧಪಡದ ಮೈಸೂರು ಸಂಸದ ಪ್ರತಾಪ್ ಸಿಂಹ ವರ್ತನೆಯೂ ಸೋಮಣ್ಣ ಅವರಿಗೆ ಹಿನ್ನಡೆ ಉಂಟು ಮಾಡಿದೆ.
4. ಮೈಸೂರು ಉಸ್ತುವಾರಿ ಸಚಿವ ಮತ್ತು ವಸತಿ ಸಚಿವರಾಗಿ ಸೋಮಣ್ಣ ಅವರು ವರುಣಾಕ್ಕೆ ಏನೂ ಕೆಲಸ ಮಾಡಿಕೊಟ್ಟಿಲ್ಲ.
5. ಸಿದ್ದರಾಮಯ್ಯ ಗೆದ್ದರೆ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂಬ ಜನಾಭಿಪ್ರಾಯ
6. ಸಿದ್ದರಾಮಯ್ಯ ಮತ್ತು ಯತೀಂದ್ರ ಅವಧಿಯಲ್ಲಿ ವರುಣಾದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು
7. ಸಿದ್ದರಾಮಯ್ಯನವರ ಪರ ಅಹಿಂದ ಮತಗಳು ಮತ್ತೆ ಕ್ರೋಢೀಕರಣಗೊಂಡಿರುವುದು
8. ಸೋಮಣ್ಣ ಗೆಲ್ಲಿಸಿದ್ರೆ ಆ ಮೇಲೆ ಅವರು ಕೈಗೆ ಸಿಗಲ್ಲ, ಶಾಸಕರನ್ನು ನೋಡಲು ಬೆಂಗಳೂರಿಗೆ ಹೋಗಬೇಕಾಗುತ್ತದೆ ಎಂಬ ಅಭಿಪ್ರಾಯ
9. ಯತೀಂದ್ರ ಅವರು ಕಳೆದ 5 ವರ್ಷದಲ್ಲಿ ನಿರಂತರವಾಗಿ ಜನ ಸಂಪರ್ಕದಲ್ಲಿರುವುದು
10. ಶೇಕಡಾ 35ರಿಂದ 40ರಷ್ಟು ಲಿಂಗಾಯತ ಮತಗಳು, ಲಿಂಗಾಯತ ಮುಖಂಡರು ಸಿದ್ದರಾಮಯ್ಯ ಬೆಂಬಲಕ್ಕಿರುವುದು