ಪಾವಗಡ ತಾಲೂಕಿನ ಓಬಳಾಪುರ ಗ್ರಾಮದ ಕೃಷ್ಣಮೂರ್ತಿ, ನಾಗರತ್ನಮ್ಮ ಸುಪುತ್ರ YK ಲೋಕನಾಥ್ ವಿಡಿಯೋಗ್ರಾಫರ್ ಆಗಿ ಪ್ರಸಾರ ಭಾರತಿಯಲ್ಲಿ ಕೆಲಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಕಳೆದ ಹಲವು ವರ್ಷಗಳಿಂದ ಪ್ರಧಾನಿ ಮೋದಿಯವರ ಆಪ್ತ ಸಹಾಯಕರಾಗಿ, ಅವರು ಕೈಗೊಂಡ ಹಲವು ವಿದೇಶ ಪ್ರವಾಸಗಳ ಭಾಗ ಆಗಿ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ YK ಲೋಕನಾಥ್ ಸೈ ಎನಿಸಿಕೊಂಡಿದ್ದಾರೆ.
ಇದೀಗ ಅವರ ಸೇವೆಯನ್ನು ಮನಗಂಡು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರ ವೈಯಕ್ತಿಕ ವಿಡಿಯೋಗ್ರಾಫರ್ ಹುದ್ದೆಗೆ ನಿಯೋಜಿಸಲಾಗಿದೆ.
ರಾಷ್ಟ್ರಪತಿ ಭವನದಲ್ಲಿ YK ಲೋಕನಾಥ್ ಸೇವೆ ಹೊಸದೇನಲ್ಲ. ಈ ಹಿಂದೆ APJ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿ ಸಂದರ್ಭದಲ್ಲಿ ಅವರ ಆಪ್ತ ವಲಯದಲ್ಲಿ ಇದ್ದುಕೊಂಡು ಕೆಲಸ ಮಾಡಿದ್ದರು. ಇದೀಗ ಎರಡನೇ ಬಾರಿಯೂ ರಾಷ್ಟ್ರಪತಿ ಭವನದ ಅಂಗಳಕ್ಕೆ ಮರಳಿದಂತಾಗಿದೆ.
ಆರ್ಯ ವೈಶ್ಯ ಸಮುದಾಯದ YK ಲೋಕನಾಥ್ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಓಬುಳಾಪುರದಲ್ಲಿಯೇ ಪೂರೈಸಿದ್ದರು. ಬೆಂಗಳೂರಿನಲ್ಲಿ ಕಲರ್ ಲ್ಯಾಬ್ ಹೊಂದಿದ್ದ ಎಂಸಿ ಗಿರೀಶ್ ಅವರಿಂದ ಪ್ರೇರಣೆ ಹೊಂದಿ, ಕ್ಯಾಮೆರಾ ಮೇಲೆ ಒಲವು ಬೆಳೆಸಿಕೊಂಡರು.
ಸರ್ಕಾರಿ ಚಲನಚಿತ್ರ, ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ನಲ್ಲಿ 1989ರಲ್ಲಿ ಡಿಪ್ಲೋಮ ಪೂರ್ತಿ ಮಾಡಿ, ಪ್ರಸಾರ ಭಾರತಿಯಲ್ಲಿ ಕೆಲಸ ಗಿಟ್ಟಿಸಿದರು. ನಂತರ ಹಿಂತುರುಗಿ ನೋಡಿದ್ದೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರ ವ್ಯಯಕ್ತಿಕ ಛಾಯಾಗ್ರಾಹಕರಾಗಿ YK ಲೋಕನಾಥ್ ಆಯ್ಕೆಯಾಗಿದ್ದರು. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತವರು ಜಿಲ್ಲೆ ತುಮಕೂರಿನಲ್ಲಿ ನಡೆದ ಪ್ರಧಾನಿ ರ್ಯಾಲಿಯನ್ನು ಲೋಕನಾಥ್ ಅವರೇ ಕವರ್ ಮಾಡಿದ್ದರು.
YK ಲೋಕನಾಥ್ ಅವರ ಬೆಳವಣಿಗೆ ಬಗ್ಗೆ ಗ್ರಾಮಸ್ಥರಿಗೆ ಹೆಮ್ಮೆ, ಸಂತೋಷ ಎರಡು ಇದೆ.