ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಸಿದಂತೆ ವಿಧಾನಸೌಧ ಪೊಲೀಸರು ಇಲ್ಲಿಯವರೆಗು ಏಳು ಜನರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ.
ವಿಚಾರಣೆ ವೇಳೆ ಏಳು ಜನ ತಾವು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಹೇಳಿದ್ದಾರೆ. ಈ ಏಳು ಮಂದಿ ಪೈಕಿ ಮೂವರ ಧ್ವನಿ ಮಾದರಿ ಹಾಗೂ ವಿಡಿಯೋ ತುಣಕನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ರವಾನೆ ಮಾಡಲಾಗಿದೆ. ಪೊಲೀಸರು ಎಲ್ಲ ಮಾಧ್ಯಮಗಳಿಂದ ವಿಡಿಯೋ ತುಣಕುಗಳನ್ನು ಪಡೆದಿದ್ದಾರೆ. ಈ ಎಲ್ಲ ವಿಡಿಯೋಗಳಲ್ಲಿ ಕೇವಲ ಒಂದು ವಿಡಿಯೋ ತುಣುಕನ್ನು ಮಾತ್ರ ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ಮೇಲೆ ವಿಧಾನಸೌಧ ಪೊಲೀಸರು 26 ಜನರ ಪಟ್ಟಿ ತಯಾರಿಸಿದ್ದು, ಇನ್ನೂ 19 ಜನರ ವಿಚಾರಣೆ ಬಾಕಿ ಇದೆ. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವಿಜಯೋತ್ಸವದ ವೇಳೆ ಪಕ್ಕದಲ್ಲಿ ಇದ್ದ ಬೆಂಬಲಿಗ ಬ್ಯಾಡಗಿ ಮೂಲದ ಮೊಹಮ್ಮದ್ ಶಫಿ ನಾಶಿಪುಡಿ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಹೀಗಾಗಿ ಬುಧವಾರ ಬ್ಯಾಡಗಿಗೆ ತೆರಳಿದ್ದ ಪೊಲೀಸರ ತಂಡ, ಮೊಹಮ್ಮೆದ್ ಶಫಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಈತನ ಧ್ವನಿ ಮಾದರಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಹೇಳಲಾಗಿದೆ.