ಶನಿವಾರ ಬೆಳ್ಳಂಬೆಳಿಗ್ಗೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭೂಕಂಪನದ ಅನುಭವವಾಗಿದೆ. ಬೆಳಿಗ್ಗೆ 6.22 ರಿಂದ 6.23ರ ವೇಳೆಗೆ ಭೂಮಿ 10 ಸೆಕೆಂಡ್ ಗೂ ಅಧಿಕ ಸಮಯ ಕಂಪಿಸಿದೆ. ಜೊತೆಗೆ ಭಾರೀ ಶಬ್ಧ ಭೂಮಿಯೊಳಗಿಂದ ಕೇಳಿಬಂದಿತು.
ಭೂಮಿಯ ಕಂಪನ ಮತ್ತು ಭಾರೀ ಶಬ್ಧದಿಂದ ಬೆಚ್ಚಿ ಬಿದ್ದ ಜನ ನಿದ್ದೆಯ ಮಂಪರಿನಲ್ಲಿಯೇ ಆತಂಕದಿಂದ ಮನೆಯಿಂದ ಓಡಿ ಹೊರಬಂದಿದ್ದಾರೆ.
ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನದ ಅನುಭವ ಆಗುತ್ತಿದ್ದು, ಜನರಿಗೆ ಸಾಮಾನ್ಯ ಸಂಗತಿಯಂತಾಗಿದೆ. ಭೂಕಂಪನದ ಕೇಂದ್ರಬಿಂದು ಯಾವುದು ಮತ್ತು ಭೂಕಂಪನದ ತೀವ್ರತೆ ಎಷ್ಟಿತ್ತು ಎಂಬುದು ಇನ್ನು ಖಚಿತವಾಗಿಲ್ಲ.
ಶನಿವಾರ ಬೆಳಿಗ್ಗೆ 6.22ಕ್ಕೆ ವಿಜಯಪುರ ನಗರ ಕೇಂದ್ರಿತವಾಗಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.9 ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಖಚಿತಪಡಿಸಿದೆ.
9.9 ಕಿ.ಮೀ. ಭೂಮಿಯ ಆಳದಲ್ಲಿ ಭೂಕಂಪನ ಸಂಭವಿಸಿದೆ. ವಿಜಯಪುರ ನಗರ ಸೇರಿದಂತೆ ಬಸವನ ಬಾಗೇವಾಡಿ, ತಿಕೋಟಾ, ಬಬಲೇಶ್ವರ, ಜಮಖಂಡಿ, ಹೊರ್ತಿ, ನೆರೆಯ ಮಹಾರಾಷ್ಟ್ರದ ಸೋಲಾಪುರ, ಪುಣೆ, ಪಂಢರಪುರದಲ್ಲೂ ಭೂಕಂಪನದ ಅನುಭವವಾಗಿದೆ.