ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ತಮ್ಮ ಬದ್ಧ ವೈರಿ ಬಿಜೆಪಿ ಶಾಸಕ ಯತ್ನಾಳ್ ಕ್ಷೇತ್ರಕ್ಕೆ ಮೊದಲ ಬಾರಿಗೆ ವಿಜಯೇಂದ್ರ ಭೇಟಿ ನೀಡಿದ್ದಾರೆ. ಆದರೆ ವಿಜಯಪುರದಲ್ಲಿ ಬಹಿರಂಗವಾಗಿ ಯತ್ನಾಳ್ ಹೆಸರು ಹೇಳಲು ವಿಜಯೇಂದ್ರ ಹಿಂದೇಟು ಹಾಕಿದ್ದು, ಯತ್ನಾಳ್ ವಿರುದ್ದ ಪರೋಕ್ಷವಾಗಿ ಗುಡುಗಿದ್ದಾರೆ
ಕೆಲವರು ಸಮಾಜ ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಅಂತ ವಿಜಯಪುರ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರೋಕ್ಷ ವಾಗ್ದಾಳಿ ನಡೆಸಿದರು.
ವಿಜಯಪುರದ ಚಿಕ್ಕಗಲಗಲಿಯಲ್ಲಿ ಬಣಜಿಗ ಸಂಘಟನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯೇಂದ್ರ, ಕೆಲವರು ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಪ್ರಯತ್ನಿಸಿದರು. ಸಮಾಜ ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದರು.
ನಾನು ಕಾರ್ಯಕ್ರಮಕ್ಕೆ ಬರದಂತೆ ತಡೆಯಲು ಕೆಲವರು ಪ್ರಯತ್ನಿಸಿದರು. ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕೇ ವಿನಃ ಒಡೆಯುವ ಕೆಲಸ ಮಾಡಬಾರದು ಅಂತ ಯತ್ನಾಳ್ ವಿರುದ್ಧ ಗುಡುಗಿದರು.
ರಾಜಕೀಯ ಕ್ಷೇತ್ರದಲ್ಲಿ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಹೆಚ್.ಪಟೇಲ್, ಯಡಿಯೂರಪ್ಪ ಸೇರಿದಂತೆ ಹಲವರು ರಾಜ್ಯ ರಾಜಕಾರಣದ ದಿಕ್ಕು ಬದಲಿಸಿದವರಿದ್ದಾರೆ. ಆದರೆ ಈ ಯಾರೂ ಕೂಡ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈಹಾಕಲಿಲ್ಲ. ಇದು ವೀರಶೈವ ಲಿಂಗಾಯತ ಸಮಾಜದ ವಿಶೇಷತೆ ಅಂತ ವಿಜಯೇಂದ್ರ ಬಿಜೆಪಿ ಶಾಸಕ ಯತ್ನಾಳ್ ಗೆ ಟಾಂಗ್ ನೀಡಿದ್ರು.
ಫ್ಲೆಕ್ಸ್ ಬ್ಯಾನರ್ ನಲ್ಲಿಲ್ಲ ಯತ್ನಾಳ್ ಫೋಟೋ
ವಿಜಯೇಂದ್ರಗೆ ಸ್ವಾಗತಕೋರಿ ವಿಜಯಪುರ ನಗರದಲ್ಲಿ ಹಾಕಲಾಗಿದ್ದ ಬ್ಯಾನರ್, ಪೋಸ್ಟರ್ಗಳಲ್ಲಿ ಯತ್ನಾಳ್ ಫೋಟೋಗಳನ್ನ ಕೈಬಿಡಲಾಗಿದೆ. ಸಮಾವೇಶದ ಬಳಿಕ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬಬಲೇಶ್ವರ ರಸ್ತೆಯಿಂದ ಬಿಜೆಪಿ ಕಚೇರಿವರೆಗೂ ಬೈಕ್ ರಾಲಿಯ ಮೂಲಕ ಅದ್ದೂರಿ ಸ್ವಾಗತ ಮಾಡಲಿದ್ದಾರೆ. ಬೈಕ್ ರ್ಯಾಲಿ ಸಾಗುವ ಮಾರ್ಗದುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಬ್ಯಾನರ್/ ಪೋಸ್ಟರ್ ಗಳು ರಾರಾಜಿಸುತ್ತಿವೆ.