ಹಿಂದಿ ರಾಷ್ಟ್ರಭಾಷೆ ಆಗುವವರೆಗೆ ಕಾಯಬೇಕು ಎಂದು ಹೇಳುವ ಮೂಲಕ ಕೃಷಿ ಸಚಿವ ಬಿ ಸಿ ಪಾಟೀಲ್ ರಾಷ್ಟ್ರಭಾಷೆ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ.
ಬೆಂಗಳೂರಿನ ಚಿಕ್ಕಜಾಲದಲ್ಲಿ ಗರಡಿ ಸಿನಿಮಾದ ಶೂಟಿಂಗ್ ವೇಳೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್ ಅವರು,ರಾಷ್ಟ್ರದಲ್ಲಿ ಹೆಚ್ಚು ಜನರು ಹಿಂದಿ ಭಾಷೆ ಮಾತಾಡುತ್ತಿದ್ದಾರೆ. ಸಂವಿಧಾನದಲ್ಲಿ ಹಿಂದಿ ರಾಷ್ಟ್ರಭಾಷೆ ಆಗುವವರೆಗೆ ಕಾಯಬೇಕು ಎಂದಿದ್ದಾರೆ.
ಇದೇ ವೇಳೆ ಹಿಂದಿ ರಾಷ್ಟ್ರಭಾಷೆ ಹೌದಾ ಅಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಲಿಲ್ಲ.
ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವ ಮಾತು ದಕ್ಷಿಣ ಭಾರತೀಯರಿಂದ ಆಗಾಗ ಕೇಳಿಬರುತ್ತಲೇ ಇದೆ. ಇತ್ತೀಚೆಗಷ್ಟೇ, ನಟ ಸುದೀಪ್ ಅವರು ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವ ಮೂಲಕ ಒಂದು ಗಟ್ಟಿ ಧ್ವನಿಯನ್ನು ನೀಡಿದ್ದರು. ಇವರ ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹಿಂದಿ ನಟ ಅಜಯ್ ದೇವಗನ್ ಹಿಂದಿ ನಮ್ಮ ರಾಷ್ಟ್ರಭಾಷೆ ಎಂದಿದ್ದರು.
ಅನಂತರ ಕನ್ನಡದ ಬಹುತೇಕ ನಟ, ನಟಿಯರು ಹಾಗೂ ರಾಜಕಾರಣಿಗಳು ಸುದೀಪ್ ಅವರ ಜೊತೆ ಧ್ವನಿಗೂಡಿಸಿದ್ದರು. ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿಯವರೇ ಸುದೀಪ್ ಅವರ ಹೇಳಿಕೆಗೆ ಸಮ್ಮತಿ ವ್ಯಕ್ತಪಡಿಸಿದ್ದರು. ಆದರೆ ಇದೀಗ, ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಹಿಂದಿ ನಮ್ಮ ರಾಷ್ಟ್ರ ಭಾಷೆ ಆಗುವವರೆಗೂ ಕಾಯಬೇಕು ಎಂದಿರುವ ಹೇಳಿಕೆ ರಾಷ್ಟ್ರಭಾಷೆ ವಿವಾದಕ್ಕೆ ಮತ್ತೊಂದು ತಿರುವು ನೀಡಿದೆ.