ADVERTISEMENT
ನಿರ್ಮಾಣ ಹಂತದ ಗೋದಾಮಿನ ಗೋಡೆ ಕುಸಿದು 5 ಮಂದಿ ಕಾರ್ಮಿಕರು ಮೃತಪಟ್ಟಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಆಲಿಪುರದಲ್ಲಿ ನಡೆದಿದೆ.
ಮಧ್ಯಾಹ್ನ ಸುಮಾರು 12:40ರ ಸುಮಾರಿಗೆ ಘಟನೆ ನಡೆದಿದ್ದು 100 ಅಡಿ ಅಗಲ ಹಾಗೂ 15 ಅಡಿ ಉದ್ದದ ಗೋಡೆ ಕುಸಿದಿದ್ದು ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಸುಮಾರು 20 ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಸ್ಥಳಕ್ಕೆ ದೌಡಾಯಿಸಿದ್ದು ಅವಶೇಷಗಳಡಿ ಸಿಲುಕಿದ್ದ 13 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಐವರ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಸುಮಾರು 5 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ ಗೋದಾಮು ನಿರ್ಮಿಸಲಾಗುತ್ತಿದ್ದು ಇದರ ಮಾಲೀಕ ಸಂಜಯ್ ಸಿಂಗ್(40) ಎಂದು ಗುಡುತಿಸಲಾಗಿದೆ. ಗುತ್ತಿಗೆದಾರನನ್ನು ಸಿಕಂದರ್ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮವನ್ನ ಜರುಗಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ADVERTISEMENT