ಪಶ್ಚಿಮ ಬಂಗಾಳದಲ್ಲಿ ಮೂರು ಜನ ಟಿಎಂಸಿ ಕಾರ್ಯಕರ್ತರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಗುರುವಾರ ಬೆಳಗ್ಗೆ ಕೋಲ್ಕತ್ತಾದಿಂದ ಸುಮಾರು 50 ಕಿಮೀ ದೂರದಲ್ಲಿರುವ ಕ್ಯಾನಿಂಗ್ನ ಜನನಿಬಿಡ ಪ್ರದೇಶದಲ್ಲಿ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಇಬ್ಬರು ಕಾರ್ಯಕರ್ತರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ಗೋಪಾಲ್ಪುರ ಗ್ರಾಮ ಪಂಚಾಯತ್ ಸದಸ್ಯ ಸ್ವಪನ್ ಮಾಝಿ ಅವರು ಬೆಳಗ್ಗೆ 9 ಗಂಟೆ ಸುಮಾರಿಗೆ ಸಭೆಗೆ ತೆರಳುತ್ತಿದ್ದಾಗ ಹಂತಕರು ಅವರ ಮೇಲೆ ಗುಂಡಿನ ದಾಳಿ ನಡೆಸಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಾರಿಯಾಗುತ್ತಿದ್ದಾಗ ಹಂತಕರು ಟಿಎಂಸಿ ನಾಯಕನ ಜೊತೆ ಇದ್ದ ಇಬ್ಬರು ಕಾರ್ಯಕರ್ತರ ಮೇಲೂ ಗುಂಡು ಹಾರಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಜನನಿಬಿಡ ರಸ್ತೆಯಲ್ಲಿ ಮೋಟಾರ್ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು, ಮೊದಲು ಮಾಝಿಗೆ ಗುಂಡು ಹಾರಿಸಿದರು. ಆತನಿಗೆ ಗುಂಡು ಹಾರಿಸಿರುವುದನ್ನು ನೋಡಿದ ಇತರ ಇಬ್ಬರು ಓಡಿಹೋಗಲು ಪ್ರಾರಂಭಿಸಿದರು. ಆದರೆ ದಾಳಿಕೋರರು ಹಿಂಬದಿಯಿಂದ ಅವರ ಮೇಲೂ ಗುಂಡು ಹಾರಿಸಿದರು. ಮೂವರ ಮೇಲೆ ಗುಂಡು ಹಾರಿಸಿದ ನಂತರ ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಭೀಕರ ಗುಂಡಿನ ದಾಳಿ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.