ಪ್ರಸ್ತುತ ನೋಂದಣಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸೆಂಟರ್ ಫಾರ್ ಸ್ಮಾರ್ಟ್ ಗೌವರ್ನೆನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಹೊಸ, ನವೀನ, ನಾಗರೀಕ ಸ್ನೇಹಿ, ವಂಚನೆ ರಹಿತ ಕಾವೇರಿ-2 ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.
ಈ ತಂತ್ರಾಂಶವನ್ನು ಏಪ್ರಿಲ್ ತಿಂಗಳಿನಿಂದಲೇ ರಾಜ್ಯಾದ್ಯಂತ ಹಂತ ಹಂತವಾಗಿ ಅಳವಡಿಸಲಾಗುತ್ತಿದೆ. ಶೀಘ್ರವೇ ಎಲ್ಲಾ 256 ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ತಂತ್ರಾಂಶವನ್ನು ಅಳವಡಿಸಲಾಗುತ್ತದೆ.
ಕಾವೇರಿ-2 ತಂತ್ರಾಂಶದ ನೋಂದಣಿ ಪ್ರಕ್ರಿಯೆಯನ್ನು ಮೂರು ಹಂತಗಳಲ್ಲಿ ವಿಭಜಿಸುವ ಮೂಲಕ ಬಳಕೆದಾರ ಸ್ನೇಹಿಯಾಗಿರುತ್ತದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ನೋಂದಣಿ ಪೂರ್ವ:
ಪೂರ್ವ ನೋಂದಣಿ ಪ್ರಕ್ರಿಯೆಯು ಸಂಪೂರ್ಣ ಆನ್ ಲೈನ್ ಮತ್ತು ಸಂಪರ್ಕ ರಹಿತವಾಗಿರುತ್ತದೆ. ನಾಗರೀಕರು ನೋಂದಣಿ ಕಛೇರಿಗೆ ಹಾಜರಾಗುವ ಮೊದಲೇ ಎಲ್ಲಾ ನೋಂದಣಿ ಸಂಬಂಧ ಡೇಟಾವನ್ನು ತಂತ್ರಾಂಶದಲ್ಲಿ ನಮೂದಿಸಿ, ದಾಖಲಾತಿಗಳನ್ನು ಆನ್ಲೈನ್ ಮೂಲಕ ಅಪ್ ಲೋಡ್ ಮಾಡಿ ಉಪನೋಂದಣಾಧಿಕಾರಿಗಳ ವರಿಶೀಲನೆಗೆ ಸಲ್ಲಿಸುತ್ತಾರೆ. ಪರಿಶೀಲಿಸಿದ ದಾಖಲೆಗಳನ್ನು ನಾಗರೀಕರಿಗೆ ನಿಗದಿತ ಶುಲ್ಕಗಳನ್ನು ಪಾವತಿಸಲು ಕಳುಹಿಸಲಾಗುತ್ತದೆ. ನಂತರ ನಾಗರೀಕರು ತಮ್ಮ ಅನುಕೂಲಕ್ಕೆ, ಅನುಗುಣವಾಗಿ ನೋಂದಣಿ ಪ್ರಕ್ರಿಯೆಗೆ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಬಹುದಾಗಿದೆ.
ನೋಂದಣಿ:
ನೋಂದಣಿ ಪ್ರಕ್ರಿಯೆಯು 10 ನಿಮಿಷಗಳ ವ್ಯವಹಾರವಾಗಿರುತ್ತದೆ. ನಾಗರೀಕರು ತಮ್ಮ ಭಾವಚಿತ್ರ ಹಾಗೂ ಹೆಬ್ಬರಳಿನ ಗುರುತನ್ನು ಸರೆ ಹಿಡಿಯುವ ಸಂಬಂಧ ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ಉಪನೋಂದಣಿ ಕಛೇರಿಗೆ ಭೇಟಿ ನೀಡುತ್ತಾರೆ.
ನೋಂದಣಿ ನಂತರ:
ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಜಿಟಲ್ ಸಹಿ ಮಾಡಿದ ದಸ್ತಾವೇಜನ್ನು ನಾಗರೀಕರ ಲಾಗಿನ್ಗೆ ಹಾಗೂ ಅವರ ಡಿಜಿಲಾಕರ್ ಖಾತೆಗೆ ಕಳುಹಿಸಲಾಗುತ್ತದೆ. ನೋಂದಾಯಿತ ದಸ್ತಾವೇಜಿನ ಮಾಹಿತಿಯನ್ನು ಸಂಬಂಧಪಟ್ಟ ಸಂಯೋಜಿತ ಇಲಾಖೆಗೆ ಖಾತಾ ಬದಲಾವಣಿಗಾಗಿ ಕಳುಹಿಸಲಾಗುತ್ತದೆ.
ಕಾವೇರಿ-2 ತಂತ್ರಾಂಶದ ಅನುಕೂಲತೆಗಳು:
– ಸಾರ್ವಜನಿಕರು ದಸ್ತಾವೇಜಿನ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಿ, ಶುಲ್ಕಗಳನ್ನು ಪಾವತಿಸಿ, ಅವರ ಆಯ್ಕೆಯ ಉಪನೋಂದಣಿ ಕಛೇರಿಯಲ್ಲಿ ದಸ್ತಾವೇಜಿನ ನೋಂದಣಿಗಾಗಿ ಸಮಯ ನಿಗದಿಪಡಿಸಿಕೊಳ್ಳಬಹುದು.
– ಸಾರ್ವಜನಿಕರು ದಸ್ತಾವೇಜಿನ ನೋಂದಣಿಗಾಗಿ ಉಪನೋಂದಣಿ ಕಛೇರಿಯಲ್ಲಿ ಕಾಯುವ ಸಮಯ ಗಣನೀಯವಾಗಿ ಕಡಿಮೆಯಾಗುತ್ತದೆ. ದಸ್ತಾವೇಜಿನ ನೋಂದಣಿ ಸಮಯದಲ್ಲಿ ಆಗುವ ಡೇಟಾ ಎಂಟ್ರಿ ತಪ್ಪುಗಳು ಕಡಿಮೆಯಾಗುತ್ತದೆ.
– ಋಣಭಾರ ಹಾಗೂ ದೃಢೀಕೃತ ನಕಲುಗಳನ್ನು ಮೊಬೈಲ್ ಅನ್ವಯಕದ ಸಹಾಯಕದಿಂದ ವಡೆಯಬಹುದಾಗಿದೆ. ಸಾರ್ವಜನಿಕರಿಗೆ ಅವರ ಅರ್ಜಿಯ ಸ್ಥಿತಿಯ ಬಗ್ಗೆ ಮೊಬೈಲ್ ಮುಖಾಂತರ ಸಂದೇಶ ನೀಡಲಾಗುತ್ತದೆ. ಸಾರ್ವಜನಿಕರು ಉಪನೋಂದಣಿ ಕಛೇರಿಯಲ್ಲಿ ಸೇವೆಯನ್ನು ಪಡೆಯದೇ ಹಿಂತಿರುಗುವುದು ಸಾಧ್ಯವಿರುವುದಿಲ್ಲ.
– ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಡಿ.ಡಿ ಮತ್ತು ಚಲನ್ಗಿಂತ ಭಿನ್ನವಾಗಿ ಇಲಾಖೆಯು ಒಂದು ದಿನ ಮುಂಚಿತವಾಗಿ ನೋಂದಣಿ ಮತ್ತು ಮುಂದ್ರಾಂಕ ಶುಲ್ಕವನ್ನು ಪಡೆಯುತ್ತದೆ.
– ಲೋಕಲ್ ಸರ್ವರ್ಗಳ ಸಮಸ್ಯೆಗಳು ಇರುವುದಿಲ್ಲ. ನಿಗದಿತ ಹೊಣೆಗಾರಿಕೆಯೊಂದಿಗೆ ಇಲಾಖೆಯ ವಿವಿಧ ಅಧಿಕಾರಿಗಳಲ್ಲಿ ಕಟ್ಟುನಿಟ್ಟಾದ ಕೆಲಸ ಹರಿವು ಇರುತ್ತದೆ.
– ವಿಪುಲವಾದ ಡೇಟಾ ವಿಶ್ಲೇಷಣೆಗೆ ಅವಕಾಶವಿದ್ದು, ಸಿರಾಸ್ತಿ ಖರೀದಿಸುವ ಗುಂಪಿನ ವಯೋಮಾನ, ಸ್ಥಿರಾಸ್ತಿಯನ್ನು ಖರೀದಿಸುವ ಮಹಿಳಯರ ಸಂಖ್ಯೆ, ರಿಯಲ್ ಎಸ್ಟೇಟ್ ಅಭಿವೃದ್ಧಿಯಾಗುತ್ತಿರುವ ಪ್ರದೇಶದ ಮಾಹಿತಿ, ವಹಿವಾಟಿನ ಮಾದರಿ ಹಾಗೂ ಇತರೆ ಮಾಹಿತಿಯನ್ನು ಪಡೆಯಬಹುದಾಗಿದೆ.
– ಇದು ರಾಜ್ಯ ದತ್ತಾಂಶ ಕೇಂದ್ರದಲ್ಲಿರುವ ಕೇಂದ್ರೀಕೃತ ತಂತ್ರಾಂಶವಾಗಿರುವುದರಿಂದ ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ವಿಶ್ಲೇಷಿಸಲು ಹಾಗೂ ಸುಲಭವಾಗಿ ಬಗೆಹರಿಸಬಹುದಾಗಿದೆ.
– ತಡೆರಹಿತ ಸೇವೆಗಾಗಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ನೋಂದಣಿ ಕಛೇರಿಗಳನ್ನು ಕಾವೇರಿ 2.0 ತಂತ್ರಾಂಶದಡಿಯಲ್ಲಿ ತರಲು ಕಂದಾಯ ಇಲಾಖೆ ಮುಂದಾಗಿದೆ. ಉಪನೋಂದಣಿ ಕಛೇರಿಯಲ್ಲಿ ಜನಸಂದಣಿ ಕಡಿಮೆ ಇರುತ್ತದೆ.
ವಂಚನೆ ರಹಿತ:
ಕಾವೇರಿ-2 ನ್ನು ವಂಚನೆ ರಹಿತ ತಂತ್ರಾಂಶವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇಂಪರ್ಸನೇಷನ್ ಹಾಗೂ ಮೋಸದ ನೋಂದಣಿಯನ್ನು ತಡೆಯುತ್ತದೆ.
ತಂತ್ರಾಂಶವನ್ನು ಇತರೆ ಇಲಾಖೆಯ ತಂತ್ರಾಂಶಗಳೊಂದಿಗೆ ಸಂಯೋಜಿಸಲಾಗಿದ್ದು, ಜಮೀನುಗಳ ವಿವರವನ್ನು ಪಡೆಯಲು ಭೂಮಿ, ಗ್ರಾಮೀಣಾ ಹಾಗೂ ನಗರ ಪ್ರದೇಶದ ಸ್ವತ್ತುಗಳಿಗೆ ಇ-ಸತ್ತು ಹಾಗೂ ಇ-ಆಸ್ತಿ”, ಶುಲ್ಕಗಳ ಪಾವತಿಗೆ ಖಜಾನೆ -2, ಕೃಷಿ ಸಾಲ ದಸ್ತಾವೇಜುಗಳ ಫೈಲಿಂಗ್ಗೆ ಫ್ರೂಟ್ಸ್ ಮತ್ತು ನಿಗದಿತ ಸಮಯದಲ್ಲಿ ಸೇವೆಗಳನ್ನು ನೀಡಲು “ಸಕಾಲ, ತಂತ್ರಾಂಶಗಳೂಂದಿಗೆ ಸಂಯೋಜಿಸಲಾಗಿದೆ.
ಇದರಿಂದ ಮೋಸದ ನೋಂದಣಿಯನ್ನು ತಡೆಯುತ್ತದೆ. ನೋಂದಾಯಿತ ದಸ್ತಾವೇಜಿನ ವಿವರಗಳನ್ನು ಸಂಬಂಧಪಟ್ಟ ಸಂಯೋಜಿತ ಇಲಾಖೆಗೆ ಮ್ಯುಟೇಷನ್ ಗಾಗಿ ಕಳುಹಿಸಲಾಗುತ್ತದೆ.
ನಾಗರೀಕರಿಗೆ ಜಾಗೃತಿ:
ಕಾವೇರಿ ತಂತ್ರಾಂಶ ನಾಗರೀಕ ಇಂಟರ್ಫೇಸ್ ಹೊಂದಿರುವುದರಿಂದ ನವೆಂಬರ್ 2022ರಿಂದ ರಾಜ್ಯಾದ್ಯಂತ ಪ್ರತಿ ತಾಲೂಕಿನಲ್ಲಿ ನಾಗರೀಕ ಜಾಗೃತಿ ಹಾಗೂ ಬಹಿರಂಗ ಚರ್ಚೆಗಳನ್ನು ನಡೆಸಲಾಗಿದೆ.
ಡೇಟಾ ಎಂಟ್ರಿ ಸುಲಭಗೊಳಿಸುವ ಉದ್ದೇಶದಿಂದ ಲಾಗಿನ್ ಸೃಜಿಸುವ ಬಗ್ಗೆ, ಡೇಟಾ ಎಂಟ್ರಿ ಮಾಡುವ ಬಗ್ಗೆ, ಶುಲ್ಕ ಪಾವತಿಸುವ ಬಗ್ಗೆ ಹಾಗೂ ಇತರೆ ವಿಷಯಗಳ ಕುರಿತು ಟ್ಯುಟೋರಿಯಲ್ ವಿಡಿಯೊಗಳನ್ನು ಇಲಾಖೆಯ ಅಧಿಕೃತ ಯುಟ್ಯೂಬ್ ಚಾನಲ್ಗೆ ಅಪ್ಲೋಡ್ ಮಾಡಲಾಗಿದೆ.
ಇಲಾಖೆಯು ಫೇಸ್ಬುಕ್ ಮತ್ತು ಟ್ವಿಟ್ಟರ್ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ನಾಗರಿಕರನ್ನು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗುತ್ತಿದೆ.
ನಾಗರಿಕರಿಗೆ ಹೊಸ ವ್ಯವಸ್ಥೆಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಹಕಾರಿಯಾಗಲು ಸಹಾಯವಾಣಿ ಕೇಂದ್ರ 080-682265316 ಸ್ಥಾಪಿಸಲಾಗಿದೆ. ಪ್ರತಿದಿನ 40 ಹೆಚ್ಚು ಕರೆಗಳನ್ನು ಸಹಾಯವಾಣಿ ಕೇಂದ್ರ ನಿರ್ವಹಿಸುತ್ತಿದೆ.
ಕ್ಷೇತ್ರ ಕಚೇರಿಗಳಲ್ಲಿ, ಉದ್ಭವಿಸುವ ತಾಂತ್ರಿಕ ಸಮಸ್ಯೆಗಳನ್ನು ತಾಂತ್ರಿಕ ತಂಡದೊಂದಿಗೆ ಸಮನ್ವಯಗೊಳಿಸಲು ಕೇಂದ್ರ ಕಚೇರಿಯಲ್ಲಿ 8 ಸದಸ್ಯರ ಸರ್ವೀಸ್ ಡೆಸ್ಕ್ ಸ್ಥಾಪಿಸಲಾಗಿದೆ.
ಮಾದರಿ ಕಛೇರಿ:
ಮೇಲಿನನ ಸುಧಾರಣೆಗಳ ಜೊತೆಗೆ, ಉಪನೋಂದಣಿ ಕಚೇರಿಯಲ್ಲಿ ಕಾಯುವ ಪ್ರದೇಶ, ವಿಶ್ರಾಂತಿ ಕೊಠಡಿ, ಆಹಾರ ನೀಡುವ ಪ್ರದೇಶ, ರಾಂಪ್, ಲಿಫ್ಟ್ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದೆ. ಇದರಿಂದ ನಾಗರೀಕರಿಗೆ ನೋಂದಣಿ ಪ್ರಕ್ರಿಯೆಯು ಹೆಚ್ಚು ಆರಾಮದಾಯಕವಾಗುತ್ತದೆ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಯು ವೃತ್ತಿಪರವಾಗುತ್ತದೆ.
ನೋಂದಣಿ ಪ್ರದೇಶದಲ್ಲಿ ಪ್ರತಿ ಪ್ರಕ್ರಿಯೆಗೆ ವಿಭಿನ್ನ ಕೌಂಟರ್ಗಳಿರುವುದರಿಂದ ಒಂದೇ ಸ್ಥಳದಲ್ಲಿ ಸರ್ವಜನಿಕರ ಗುಂಪನ್ನು ತಪ್ಪಿಸುತ್ತದೆ ಮತ್ತು ಕಡಿಮೆ ಸಮಯದಲ್ಲಿ ಸುಗಮ ನೋಂದಣಿ ಪ್ರಕ್ರಿಯೆ ನಡೆಯುತ್ತದೆ.
ಕಳೆದ ವರ್ಷ ಮಾರ್ಗಸೂಚಿ ದರದ ಮೇಲೆ ಶೇ. 10 ರಷ್ಟು ರಿಯಾಯಿತಿ ನೀಡಲಾಗಿತ್ತು. ಆದರೆ ಪ್ರಸ್ತುತ ಸಾಲಿನಲ್ಲಿ ಯಾವುದೇ ರಿಯಾಯಿತಿ ಇಲ್ಲದಿದ್ದರೂ ಹೊಸ ತಂತ್ರಜ್ಞಾನವನ್ನು ಅಳವಡಿಸಿದ್ದರೂ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಿದ್ದರೂ ಸಹ ರೂ. 200 ಕೋಟಿಗಳಿಗೂ ಹೆಚ್ಚು ರಾಜಸ್ವ ಸಂಗ್ರಹಣೆಯಾಗಿರುವುದು ಗಮನಾರ್ಹ ಸಂಗತಿಯಾಗಿರುತ್ತದೆ.