ಮೂರು ರಾಜ್ಯಗಳಲ್ಲಿ ಬಿಜೆಪಿ ಹೊಸಬರನ್ನು ಮುಖ್ಯಮಂತ್ರಿಗಳನ್ನಾಗಿ ಘೋಷಿಸಿದೆ. ಛತ್ತೀಸ್‌ಗಢದಲ್ಲಿ ವಿಷ್ಣು ದಿಯೋ ಸಾಯಿ, ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ಮತ್ತು ರಾಜಸ್ಥಾನದಲ್ಲಿ ಭಜನ್‌ಲಾಲ್ ಶರ್ಮಾ ಸಿಎಂ ಸ್ಥಾನಕ್ಕೆ ಪಕ್ಷದ ಹೊಸ ಆಯ್ಕೆಗಳು.
ಹಾಗಾದರೆ ದೀರ್ಘಕಾಲದಿಂದ ಮುಖ್ಯಮಂತ್ರಿಗಳಾಗಿದ್ದ ಮೂವರ ರಾಜಕೀಯ ಭವಿಷ್ಯ ಏನು..? ಛತ್ತೀಸ್‌ಗಢ ಮುಖ್ಯಮಂತ್ರಿಗಳಾಗಿದ್ದ ರಮಣ್ ಸಿಂಗ್, ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೆ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚವ್ಹಾಣ್ ಅವರ ಮುಂದಿನ ಆಯ್ಕೆಗಳೇನು..?
ಶಿವರಾಜ್ ಸಿಂಗ್ ಚವ್ಹಾಣ್:
ಮೋಹನ್ ಯಾದವ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ನೀಡಿದ ವಿದಾಯದ ಭಾಷಣದಲ್ಲಿ ʻಹೋಗಿ ಕೇಳುವುದಕ್ಕಿಂತ ಸಾಯೋದೇ ಮೇಲುʼ ಎಂದು ಶಿವರಾಜ್ ಸಿಂಗ್ ಚವ್ಹಾಣ್ ಆಡಿದ ಮಾತು ಅತ್ಯಂತ ಮಹತ್ವದ್ದು.
2003ರಿಂದ 2018ರವರೆಗೆ ಮತ್ತು 2020ರಿಂದ 2023ರವರೆಗೆ 18 ವರ್ಷಗಳವರೆಗೆ ಮುಖ್ಯಮಂತ್ರಿಯಾಗಿದ್ದವರು ಚವ್ಹಾಣ್. ಮಧ್ಯಪ್ರದೇಶದಲ್ಲಿ ಪ್ರೀತಿಯಿಂದ ಮಾಮಾ ಎಂದು ಕರೆಸಿಕೊಳ್ಳುವ ಚವ್ಹಾಣ್ ವಯಸ್ಸು 64. ಅಂದರೆ ಬಿಜೆಪಿಯಲ್ಲಿರುವ ಅಘೋಷಿತ ವಯಸ್ಸಿನ ಮಿತಿಗಿಂತ ಆರತ್ತು ವರ್ಷ ಕಡಿಮೆ.
ಗುಜರಾತ್ ಮುಖ್ಯಮಂತ್ರಿ ಹುದ್ದೆಯಿಂದ ಆನಂದಿಬೆನ್ ಪಟೇಲ್ ಅವರನ್ನು ಇಳಿಸಿದ್ದ ಬಿಜೆಪಿ ಸೀದಾ ಕಳುಹಿಸಿದ್ದು ರಾಜ್ಯಪಾಲೆಯನ್ನಾಗಿ. ಚವ್ಹಾಣ್ ಅವರನ್ನೂ ಅದೇ ರೀತಿ ರಾಜ್ಯಪಾಲರನ್ನಾಗಿ ಕಳುಹಿಸಬಹುದು.
ಮೋದಿಗಿಂತಲೂ ಮೊದಲೇ ಮುಖ್ಯಮಂತ್ರಿಯಾಗಿ ಹೆಸರು ಮಾಡಿದ್ದ ಚವ್ಹಾಣ್ ಅವರನ್ನು ಬಿಜೆಪಿ ಪ್ರಧಾನಮಂತ್ರಿ ಮೋದಿ ಅವರ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಬಹುದು. (ಮುಂದಿನ ಲೋಕಸಭಾ ಚುನಾವಣೆಗೂ ಮೊದಲೇ ಮಾಡಬಹುದು ಅಥವಾ ಒಂದು ವೇಳೆ ಲೋಕಸಭಾ ಚುನಾವಣೆ ಬಳಿಕ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬಂದರೆ ಆ ಬಳಿಕ ಮಾಡಬಹುದು). ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದ ಬಿಜೆಪಿ ಮೋದಿ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿತ್ತು.
ಅಥವಾ ಪಕ್ಷದಲ್ಲೇ ಪ್ರಮುಖ ಹುದ್ದೆಯನ್ನು ನೀಡಬಹುದು. ಆದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಜೆಪಿ ತನ್ನ ಸಂಘಟನೆಯನ್ನು ಪುನರ್‌ರಚಿಸುವ ವೇಳೆ ಸಂಸದೀಯ ಮಂಡಳಿಯಿಂದ ಚವ್ಹಾಣ್ ಅವರನ್ನು ಕೈಬಿಟ್ಟಿತ್ತು ಮತ್ತು ಯಡಿಯೂರಪ್ಪ ಅವರನ್ನು ಮಂಡಳಿಗೆ ಸೇರಿಸಿತ್ತು.
ಚವ್ಹಾಣ್ ಅವರ ಮಾತನ್ನೇ ಉಲ್ಲೇಖಿಸುವುದಾದರೆ ʻಹೋಗಿ ಕೇಳುವುದಕ್ಕಿಂತ, ಸಾಯೋದೇ ಮೇಲುʼ. ಅಂದರೆ 18 ವರ್ಷ ಸುದೀರ್ಘ ಅಧಿಕಾರ ಅನುಭವಿಸಿದ ಚವ್ಹಾಣ್‌ಗೆ ಇನ್ಮುಂದೆ ಪಕ್ಷ ನೀಡಬಹುದಾದ ಹುದ್ದೆಗಳು ನಗಣ್ಯವಷ್ಟೇ.
ವಸುಂಧರಾ ರಾಜೆ:
2024ರ ಮಾರ್ಚ್ 8ರಂದು 71 ವರ್ಷ ಪೂರೈಸಲಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆಗೆ ನಿರೀಕ್ಷೆಯಂತೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ. 10 ವರ್ಷದ ಅವಧಿಗೆ ಸಿಎಂ ಆಗಿದ್ದ ರಾಜೆ ಬದಲಿಗೆ ಮೊದಲ ಬಾರಿಗೆ ಗೆದ್ದಿರುವ ಶಾಸಕ ಭಜನ್‌ಲಾಲ್ ಶರ್ಮಾ ಅವರನ್ನು ಬಿಜೆಪಿ ದೊಡ್ಡ ಹುದ್ದೆಗೆ ಆಯ್ಕೆ ಮಾಡಿದೆ.
ಈ ವಿಧಾನಸಭಾ ಚುನಾವಣೆಯಲ್ಲಿ ವಸುಂಧರಾ ಅವರನ್ನು ಪಕ್ಷದ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮೋದಿ ನಾಯಕತ್ವದಲ್ಲೇ ಚುನಾವಣೆಗೆ ಹೋದ ಬಿಜೆಪಿ ರಾಜೆಗೆ ಪ್ರಮುಖ ಚುನಾವಣಾ ಜವಾಬ್ದಾರಿಗಳನ್ನೂ ಕೊಟ್ಟಿರಲಿಲ್ಲ. ಆ ಮೂಲಕ ಚುನಾವಣೆ ವೇಳೆಯೇ ಬಿಜೆಪಿ ಸಂದೇಶ ರವಾನಿಸಿತ್ತು.
ವಸುಂಧರಾ ಈಗ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ. ಅವರ ಮಗ ದುಶ್ಯಂತ್ ಸಿಂಗ್ ನಾಲ್ಕು ಬಾರಿ ಲೋಕಸಭಾ ಸಂಸದ. ರಾಜಸ್ಥಾನ ಬಿಜೆಪಿ ಅಧ್ಯಕ್ಷರಾಗಿಯೂ ಅಧಿಕಾರ ಅನುಭವಿಸಿದ್ದ ೭೦ರ ಗಡಿ ದಾಟಿರುವ ರಾಜೆಗೆ ಬಿಜೆಪಿ ಮತ್ತೆ ದೊಡ್ಡ ಹುದ್ದೆಯನ್ನು ಕೊಟ್ಟು ಮಣೆ ಹಾಕುವುದು ಅನುಮಾನ. ರಾಜ್ಯಪಾಲೆಯನ್ನಾಗಿ ಮಾಡುವ ಆಫರ್‌ನ್ನು ಪಕ್ಷ ನೀಡಬಹುದಾದರೂ ಯಡಿಯೂರಪ್ಪರಂತೆ ಆಕೆಯೂ ಅದನ್ನು ನಿರಾಕರಿಸಬಹುದು ಅಥವಾ ಪುತ್ರ ದುಶ್ಯಂತ್‌ಗೆ ಮೋದಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬಹುದು.
ಪ್ರಚಂಡ ಬಹುಮತದಿಂದ ರಾಜಸ್ಥಾನದಲ್ಲಿ ಬಿಜೆಪಿ ಗೆದ್ದಿರುವ ಕಾರಣ ಕರ್ನಾಟಕದಲ್ಲಿ ಯಡಿಯೂರಪ್ಪ ಪುತ್ರನಿಗೆ ಕರೆದು ಮಣೆ ಹಾಕಿದಂತೆ ರಾಜೆ ಕುಟುಂಬಕ್ಕೆ ಮಣೆ ಹಾಕುವುದು ಅನುಮಾನ.
ರಮಣ್ ಸಿಂಗ್:
2018ರಲ್ಲಿ ಛತ್ತೀಸ್‌ಗಢದಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ಸದ್ದೇ ಇಲ್ಲದಂತೆ ಕಂಡವರು ಮಾಜಿ ಮುಖ್ಯಮಂತ್ರಿ ಎಂದರೆ ರಮಣ್ ಸಿಂಗ್. ಛತ್ತೀಸ್‌ಗಢದಲ್ಲಿ ಇವರಷ್ಟು ದೀರ್ಘಕಾಲ ಯಾರೂ ಸಿಎಂ ಆಗಿಲ್ಲ. ಆದರೆ ರಮಣ್ ಸಿಂಗ್ ಅವರನ್ನು ಬಿಜೆಪಿ ಈಗ ವಿಧಾನಸಭೆಯ ಸ್ಪೀಕರ್‌ರನ್ನಾಗಿ ಮಾಡಿದೆ.
2018ರಲ್ಲಿ ಬಿಜೆಪಿ ಸೋತ ಬಳಿಕ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ಚವ್ಹಾಣ್, ರಾಜೆ ಅಥವಾ ಯಡಿಯೂರಪ್ಪಗೆ ಹೋಲಿಸಿದರೆ ರಮಣ್ ಸಿಂಗ್ ಬಂಡೇಳುವ, ಸಿಡಿದೇಳುವ ನಾಯಕನಲ್ಲ.
ADVERTISEMENT
ADVERTISEMENT