ADVERTISEMENT
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಪತ್ನಿ ಅಮೃತಾ ಫಡ್ನಾವೀಸ್ ದಾಖಲಿಸಿದ್ದ ಸುಲಿಗೆ ಪ್ರಕರಣ ಸಂಬಂಧ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ.
ಕ್ರಿಕೆಟ್ ಬುಕ್ಕಿ ಅನಿಲ್ ಜೈಸಿಂಘಾನಿ ಜೊತೆಗೆ ಅಮೃತಾ ಫಡ್ನಾವೀಸ್ ಅವರು ನಡೆಸಿರುವ ವಾಟ್ಸಾಪ್ ಚ್ಯಾಟ್ನಲ್ಲಿ
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾ ವಿಕಾಸ ಅಗಾಡಿ ಮೈತ್ರಿಕೂಟವನ್ನು ಉರುಳಿಸುವಂತೆಯೂ ಮತ್ತು ಈಗ ಮುಖ್ಯಮಂತ್ರಿ ಆಗಿರುವ ಏಕನಾಥ್ ಶಿಂಧೆ ಮತ್ತು ಅನಿಲ್ ಪರಬ್ ಅವರನ್ನು ಖೆಡ್ಡಾಕ್ಕೆ ಕೆಡುವವಂತೆಯೂ ಹೇಳಿದ್ದರು
ಎಂದು ಬುಕ್ಕಿ ಸಿಂಘಾನಿ ಪೊಲೀಸರಿಗೆ ಸಲ್ಲಿಸಿರುವ ದಾಖಲೆಯಲ್ಲಿ ಹೇಳಿದ್ದಾನೆ.
ಕ್ರಿಕೆಟ್ ಬುಕ್ಕಿ ಅನಿಲ್ ಜೈ ಸಿಂಘಾನಿ ಮಗಳು ಅನಿಷ್ಕಾ 2021ರ ನವೆಂಬರ್ನಲ್ಲಿ ಅಮೃತಾ ಫಡ್ನಾವೀಸ್ರನ್ನು ಭೇಟಿಯಾಗಿದ್ದಳು.
ತಾನು ಬಟ್ಟೆ, ಪಾದರಕ್ಷೆ ಮತ್ತು ಬ್ಯಾಗ್ಗಳನ್ನು ಡಿಸೈನ್ ಮಾಡುತ್ತೇನೆ ಎಂದು ಪರಿಚಯಿಸಿಕೊಂಡಿದ್ದಳು. 27 ವರ್ಷದ ಕಾನೂನು ವಿದ್ಯಾರ್ಥಿನಿಯಾಗಿರುವ ಈಕೆ ತನಗೆ ತಾಯಿ ಇಲ್ಲವೆಂದೂ ತನ್ನ ಕುಟುಂಬಕ್ಕೆ ನೆರವಿನ ಅಗತ್ಯವಿದೆಯೆಂದೂ ಅಮೃತಾ ಫಡ್ನಾವೀಸ್ ಅವರಿಗೆ ಹೇಳಿದ್ದಳು.
ಅಮೃತಾ ಫಡ್ನಾವೀಸ್ ಅವರು ಈ ವರ್ಷದ ಫೆಬ್ರವರಿ 20ರಂದು ಕೊಟ್ಟ ದೂರಿನ ಪ್ರಕಾರ ವಾಯ್ಸ್ ಮೆಸೇಜ್ ಮತ್ತು ವೀಡಿಯೋ ಕ್ಲಿಪ್ಗಳನ್ನು ಬಹಿರಂಗಪಡಿಸುವುದಾಗಿ ಅನಿಷ್ಕಾ ಜೈಸಿಂಘಾನಿ ಬೆದರಿಕೆ ಹಾಕಿದ್ದಳು. 10 ಕೋಟಿ ರೂಪಾಯಿ ಕೊಡುವಂತೆಯೂ ಮತ್ತು ತನ್ನ ತಂದೆಯ ವಿರುದ್ಧದ ಎಲ್ಲ ಪ್ರಕರಣಗಳನ್ನೂ ತೆಗೆದುಹಾಕಬೇಕೆಂದು ಬೇಡಿಕೆ ಇಟ್ಟಿದ್ದಳು.
ಜೊತೆಗೆ ತನ್ನ ತಂದೆ ವಿರುದ್ಧ ಇರುವ ಹಲವು ಪ್ರಕರಣಗಳನ್ನು ತೆಗೆದುಹಾಕಲು 1 ಕೋಟಿ ರೂಪಾಯಿ ಆಮಿಷ ಒಡ್ಡಿದ್ದಳು, ಆದ್ರೆ ಅದನ್ನು ನಿರಾಕರಿಸಿದ್ದಾಗಿ ಅಮೃತಾ ಫಡ್ನಾವೀಸ್ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ADVERTISEMENT