ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುವ ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕದಡುವ ಸಂಸ್ಥೆಗಳನ್ನು ನಿಷೇಧಿಸುವ ಬಗ್ಗೆ ಕಾಂಗ್ರೆಸ್ ನೀಡಿದ ಚುನಾವಣಾ ಭರವಸೆಯಿಂದ ಬಿಜೆಪಿ ಮತ್ತು ಸಂಘ ಪರಿವಾರಗಳು ಏಕೆ ತೀವ್ರವಾಗಿ ಗಲಿಬಿಲಿಗೊಂಡಿವೆ? ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ, ಸುಪ್ರೀಂಕೋರ್ಟ್ ವಕೀಲ ಸಂಕೇತ್ ಏಣಗಿ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರಗಳು ಕಾನೂನು ಮತ್ತು ಸುವ್ಯವಸ್ಥೆ ಮತ್ತು ಶಾಂತಿ ಮತ್ತು ಸಾಮರಸ್ಯವನ್ನು ಕದಡುವುದನ್ನು ಉತ್ತೇಜಿಸುತ್ತದೆಯೇ ಅಥವಾ ಬಯಸುತ್ತದೆಯೇ?.. ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳನ್ನು ಕಂಡು ಬಿಜೆಪಿ ಮತ್ತು ಸಂಘಪರಿವಾರ ಬೆಚ್ಚಿಬಿದ್ದಿವೆ. ಹೀಗಾಗಿ ಈ ರೀತಿ ವರ್ತನೆ ತೋರುತ್ತಿವೆ. ಬಿಜೆಪಿಯವರೇ, ಸಂಘಪರಿವಾರದವರೇ ನಿಮ್ಮ ದ್ವೇಷ ರಾಜಕೀಯವನ್ನು ಕರ್ನಾಟಕದ ಮತದಾರರು ಅರ್ಥ ಮಾಡಿಕೊಂಡಿದ್ದಾರೆ. ಶಾಂತಿ ಮತ್ತು ಸೌಹಾರ್ದತೆಗಾಗಿ ದಕ್ಷಿಣ ಭಾರತದಿಂದಲೇ ಬಿಜೆಪಿಯ ಗಂಟು ಮೂಟೆ ಕಟ್ಟಿಸಲು ಕಾಂಗ್ರೆಸ್ ಗೆ ಮತಹಾಕಲು ಮತದಾರರು ನಿರ್ಧರಿಸಿದ್ದಾರೆ ಎಂದು ಸಂಕೇತ್ ಏಣಗಿ ಟ್ವೀಟ್ ಮಾಡಿದ್ದಾರೆ.
ವಾವ್.. ಪ್ರಧಾನಿ ಮೋದಿ, ಅಮಿತ್ ಶಾ. ಯೋಗಿ ಆದಿತ್ಯನಾಥ್, ಹಿಮಂತಬಿಸ್ವಾಸ್ ಶರ್ಮಾ, ಸ್ಮೃತಿ ಇರಾನಿ ಮತ್ತು ಬಿಜೆಪಿಯ ಇತರೆ ನಾಯಕರು ಮತ್ತು ಆರ್ಎಸ್ಎಸ್ ಮುಖಂಡರು ಅವರ ಚುನಾವಣಾ ಪ್ರಣಾಳಿಕೆಯ ಅಂಶಗಳ ಬಗ್ಗೆ ಚರ್ಚೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿಯವರು ಎಂದಿಗೂ ಕೊಟ್ಟ ಮಾತಿನಂತೆ ನಡೆಯುವವರಲ್ಲ. ನೈತಿಕ ಅಧಃಪತನವನ್ನು ಬಿಜೆಪಿ ಕಂಡಿದೆ ಎಂದು ಸಂಕೇತ್ ಏಣಗಿ ವಾಗ್ದಾಳಿ ನಡೆಸಿದ್ದಾರೆ.
ಭಜರಂಗದಳದ ಬಗ್ಗೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವುದು ಏನು?
ನ್ಯಾಯಪೀಠದೆದುರು ಎಲ್ಲರೂ ಸಮಾನರೇ.. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ, ಭಜರಂಗದಳ ಮತ್ತು ಪಿಎಫ್ಐ ಸೇರಿದಂತೆ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ, ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.. ಎಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದೆ.