`ಎಲ್ಲ ಮಸೀದಿಗಳಲ್ಲಿ ಶಿವಲಿಂಗವನ್ನು ಯಾಕೆ ಹುಡುಕಬೇಕು..?’ ಎಂದು ಕೇಳಿರುವ ಬಿಜೆಪಿ ಪಕ್ಷದ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ `ಆರ್ಎಸ್ಎಸ್ ದೇವಸ್ಥಾನ ಚಳುವಳಿಯನ್ನು ಹಮ್ಮಿಕೊಳ್ಳಲ್ಲ‘ ಎಂದು ಸ್ಪಷ್ಟಪಡಿಸಿದ್ದಾರೆ.
ಆರ್ಎಸ್ಎಸ್ ಕೇಂದ್ರ ಕಚೇರಿ ಇರುವ ನಾಗ್ಪುರದಲ್ಲಿ ಮೂರು ದಿನಗಳ ತರಬೇತಿಯ ಸಮಾರೋಪದಲ್ಲಿ ಮಾತಾಡಿದ ಅವರು,
`ನಾವು ಸ್ಥಳಗಳ ಮೇಲೆ ನಮಗೆ ವಿಶೇಷ ನಂಬಿಕೆ ಎನ್ನುವುದು ಸತ್ಯ, ಆದ್ರೆ ಯಾರೂ ಪ್ರತಿದಿನ ಹೊಸ ವಿಷಯ ಎತ್ತಬಾರದು. ವಿವಾದಗಳನ್ನು ಯಾಕೆ ತೀವ್ರಗೊಳಿಸಬೇಕು..? ಗ್ಯಾನವಾಪಿ ಬಗ್ಗೆ ನಮಗೆ ನಂಬಿಕೆ ಇದೆ, ಆದ್ರೆ ಪ್ರತಿಯೊಂದು ಮಸೀದಿಯಲ್ಲೂ ಯಾಕೆ ಶಿವಲಿಂಗ ಹುಡುಕಬೇಕು..?’ ಎಂದು ಮೋಹನ್ ಭಾಗವತ್ ಪ್ರಶ್ನಿಸಿದ್ದಾರೆ.
ಆರ್ಎಸ್ಎಸ್ ಮುಖ್ಯಸ್ಥರ ಈ ಹೇಳಿಕೆ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಸೀದಿಗಳು ಈ ಹಿಂದೆ ದೇವಸ್ಥಾನಗಳಾಗಿದ್ದವು ಎಂದು ಹಿಂದೂ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
`ಈಗ ಗ್ಯಾನವಾಪಿ ವಿಷಯ ನಡೆಯುತ್ತಿದೆ. ಅಲ್ಲೊಂದು ಇತಿಹಾಸವಿದೆ, ಅದನ್ನು ನಾವು ಬದಲಿಸಲು ಸಾಧ್ಯವಿಲ್ಲ. ಆ ಇತಿಹಾಸ ಇವತ್ತು ಮಾಡಿದ್ದಲ್ಲ, ಇವತ್ತಿನಿಂದ ಹಿಂದೂಗಳಿಂದಲೂ ಅಲ್ಲ, ಮುಸ್ಲಿಮರಿಂದಲೂ ಅಲ್ಲ. ಅದು ಭಾರತಕ್ಕೆ ಅಕ್ರಮಣಕಾರರೊಂದಿಗೆ ಇಸ್ಲಾಂ ಪ್ರವೇಶಿಸಿದ ವೇಳೆ ಆಗಿದ್ದರು. ಆ ಆಕ್ರಮಣದ ವೇಳೆ ಸ್ವತಂತ್ರ ಬಯಸಿದ್ದವರ ಸ್ಥೈರ್ಯವನ್ನು ಕುಗ್ಗಿಸಲು ದೇವಸ್ಥಾನಗಳನ್ನು ಧ್ವಂಸಗೊಳಿಸಲಾಯಿತು. ಅಂತಹ ಸಾವಿರ ದೇವಸ್ಥಾನಗಳಿವೆ‘ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
`ನಾವು ಏನು ಹೇಳಬೇಕೋ ಅದನ್ನು ನವೆಂಬರ್ 9ರಂದೇ ಹೇಳಿದ್ವಿ. ರಾಮಜನ್ಮಭೂಮಿ ಚಳುವಳಿ ನಡೆದಿತ್ತು. ನಾವು ಅದರಲ್ಲಿ ಭಾಗಿ ಆದ್ವಿ, ಅದು ನಮ್ಮ ಸಂಘಟನೆಯ ಸ್ವರೂಪಕ್ಕೆ ವಿರುದ್ಧವಾಗಿದ್ದರೂ, ಕೆಲವು ಐತಿಹಾಸಿಕ ಕಾರಣಗಳು ಮತ್ತು ಆ ಕಾಲದ ಸ್ಥಿತಿಯ ಹಿನ್ನೆಲೆಯಲ್ಲಿ ಭಾಗಿ ಆದ್ವಿ. ನಾವು ಆ ಕೆಲಸವನ್ನು ಪೂರ್ಣಗೊಳಿಸಿದ್ದೇವೆ ಮತ್ತು ನಾವು ಇನ್ನು ದೇವಸ್ಥಾನ ಚಳುವಳಿಯನ್ನು ಮುಂದುವರೆಸಲು ಬಯಸಲ್ಲ’ ಎಂದು ಮೋಹನ್ ಭಾಗವತ್ ಅವರು ಹೇಳಿದ್ದಾರೆ.