ತ್ರಿಪುರ, ಅರುಣಾಚಲಪ್ರದೇಶ, ಅಸ್ಸಾಂ, ಮಣಿಪುರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಉಳಿದ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದೆ..
ನರೇಂದ್ರ ಮೋದಿ ಪ್ರಧಾನಿಯಾದ ದಿನದಿಂದಲೂ ಈಶಾನ್ಯ ಭಾರತ ಎದುರಿಸುತ್ತಿರುವ ಸಮಸ್ಯೆಗಳನ್ನ ನಿವಾರಣೆ ಮಾಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ. ಒಂದು ಕಾಲದಲ್ಲಿ ಹಿಂಸೆ, ಅಶಾಂತಿಗೆ ಹೆಸರಾಗಿದ್ದ ಈಶಾನ್ಯ ರಾಜ್ಯಗಳು ಈಗ ಅಭಿವೃದ್ಧಿಯನ್ನು ಕಾಣುತ್ತಿವೆ ಎಂದು ಹೇಳುತ್ತಿದ್ದಾರೆ.
ಆದರೆ, ವಾಸ್ತವಾಂಶವೇ ಬೇರೆ ಇದೆ. ಮಣಿಪುರದ ಜೊತೆ ಅಸ್ಸಾಂ, ತ್ರಿಪುರ, ಮೇಘಾಲಯ, ಮಿಜೋರಂನಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುತ್ತಲೇ ಇದೆ.
2021ರ ಆಗಸ್ಟ್ನಲ್ಲಿ ಅಸ್ಸಾಂ-ಮಿಜೋರಂ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಐವರು ಅಸ್ಸಾಂ ಪೊಲೀಸರು ಮರಣಿಸಿದ್ದರು.
2021ರ ಅಕ್ಟೋಬರ್ನಲ್ಲಿ ತ್ರಿಪುರದಲ್ಲಿ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷ ನಡೆದಿತ್ತು.
2022ರ ನವೆಂಬರ್ನಲ್ಲಿ ಅಸ್ಸಾಂ-ಮೇಘಾಲಯ ಗಡಿಯಲ್ಲಿ ಹಿಂಸಾಚಾರ ನಡೆದಿತ್ತು. ಆರು ಮಂದಿ ಸಾವನ್ನಪ್ಪಿದ್ದರು.
ಕಳೆದ ಎರಡು ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ನೂರಕ್ಕೂ ಹೆಚ್ಚು ಮಂದಿ ಸಾಮಾನ್ಯ ಜನ ಸಾವನ್ನಪ್ಪಿದ್ದಾರೆ.
೫೦ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ತುಂಬಾ ಜನರ ಮನೆಗಳು- ಅಂಗಡಿಗಳು ಭಸ್ಮವಾಗಿವೆ.. ಪ್ರಾರ್ಥನಾ ಮಂದಿರಗಳು ಹೊತ್ತಿ ಉರಿದಿವೆ.
ಗೃಹ ಸಚಿವ ಅಮಿvತ್ ಶಾ ಮಣಿಪುರಕ್ಕೆ ಹೋಗಿದ್ದರು, ಅಸ್ಸಾ ಸಿಎಂ ಹಿಮಂತ ಬಿಸ್ವಾಸ್ ಶರ್ಮಾಗೆ ಮತೇಯಿ-ಕುಕಿ ವರ್ಗಗಳ ನಡುವಣ ದ್ವೇಷದ ಅಂತರವನ್ನು ತಗ್ಗಿಸುವ ಹೊಣೆ ನೀಡಿದ್ದರು. ಆದರೆ, ಹಿಂಸೆ ಮಾತ್ರ ಕಡಿಮೆ ಆಗಿಲ್ಲ.
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಈಗಲೂ ಹಿಂಸೆಯ ದಳ್ಳುರಿ ಮುಂದುವರೆಯುತ್ತಿದೆ. ಸೇನೆಗೂ ಇಲ್ಲಿ ಏನು ಮಾಡಲು ಆಗುತ್ತಿಲ್ಲ. ಇಲ್ಲಿ ವಿಫಲವಾಗಿದ್ದು ಪ್ರಧಾನಿ ಮೋದಿನಾ..? ಮಣಿಪುರ ಸಿಎಂ ಬೀರೇನ್ ಸಿಂಗ್ ಅವರಾ?
ಮಣಿಪುರ ಪ್ರವಾಸ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜಕೀಯ ಪಕ್ಷಗಳ ಜೊತೆ ಚರ್ಚೆ ನಡೆಸಿದ್ದರು. 15 ದಿನಗಳಲ್ಲಿ ಶಾಂತಿಮರುಸ್ಥಾಪನೆ ಆಗಬೇಕು ಎಂದಿದ್ದರು. ಆದರೆ, ಮಣಿಪುರದಲ್ಲಿ ಈಗ ಪರಿಸ್ಥಿತಿ ಮತ್ತಷ್ಟು ದಾರುಣವಾಗಿದೆ. ಕೇಂದ್ರ ಸಚಿವರ ಮನೆಗಳು ಧಗಧಗಿಸಿವೆ.
ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ.. ಇಲ್ಲಿನ ಸರ್ಕಾರ ಶಾಂತಿ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ
ಎಂದು ಖುದ್ದು ಕೇಂದ್ರ ಸಚಿವ ಆರ್ ಕೆ ರಂಜನ್ ಸಿಂಗ್ ನೇರಾನೇರ ಆರೋಪ ಮಾಡುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಪರಿಸ್ಥಿತಿ ಸರಿ ಮಾಡಲು ಅಗತ್ಯ ಕ್ರಮ ತೆಗೆದುಕೊಂಡಿಲ್ಲ.. ಜನರ ರಕ್ಷಣೆಯನ್ನೇ ಸರ್ಕಾರ ಮರೆತುಬಿಟ್ಟಿದೆ. ತಮ್ಮನ್ನು ತಾವೆ ರಕ್ಷಿಸಿಕೊಳ್ಳಬೇಕಾದ ಸ್ಥಿತಿ ಏರ್ಪಟ್ಟಿದೆ ಎಂದು ಎರಡು ಸಮುದಾಯಗಳ ಜನ ಭಾವಿಸುತ್ತಿದ್ದಾರೆ. ಹಿಂಸೆಯನ್ನು ಎದುರಿಸಲು ಜನ ಹಿಂಸೆಯನ್ನೇ ಆಶ್ರಯಿಸಿದ ಕಾರಣ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿದೆ