ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರಿಪಳ್ಳ ಗ್ರಾಮದಲ್ಲಿ ಏಪ್ರೀಲ್ 19 ರಂದು ಬುಡಕಟ್ಟು ಮಹಿಳೆಯೊಬ್ಬರ ಮೇಲೆ ಒಂಬತ್ತು ಜನರ ತಂಡವೊಂದು ದಾಳಿ ಮಾಡಿ ಆ ಮಹಿಳೆಯನ್ನು ಅರೆ ನಗ್ನಗೊಳಿಸಿ ಹಲ್ಲೆ ನಡೆಸಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 9 ಜನರನ್ನು ಬಂದಿಸಿದ್ದಾರೆ.
ಹಲ್ಲೆಗೊಳಗಾದ 35 ವರ್ಷದ ಮಹಿಳೆ 9 ಜನರ ಗುಂಪು ತನ್ನ ಬಟ್ಟೆಗಳನ್ನು ಹರಿದು ಅರೆ ನಗ್ನಗೊಳಿಸಿ ಹಲ್ಲೆನಡೆಸಿರುವುದಲ್ಲದೇ ಆ ಘಟನೆಯ ವೀಡಿಯೊವನ್ನು ಚಿತ್ರೀಕರಿಸಿದೆ. ತಮ್ಮ ಅಕ್ಕ ಮತ್ತು ತಾಯಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳಾದ ಸಂದೀಪ್ (30), ಸಂತೋಷ್ (29), ಗುಲಾಬಿ (55), ಸುಗುಣ (30), ಕುಸುಮಾ (38), ಲೋಕಯ್ಯ (55), ಅನಿಲ್ (35), ಲಲಿತಾ (40) ಮತ್ತು ಚೆನ್ನ ಕೇಶವ (40) ಅವರನ್ನು ಬಂದಿಸಿದ್ದಾರೆ.
ಬಂಧಿತರೆಲ್ಲರೂ ಸಂತ್ರಸ್ತೆಯ ಗ್ರಾಮಕ್ಕೆ ಸೇರಿದವರು ಎಂದು ವಿಚಾರಣೆ ನಡೆಸುತ್ತಿರುವ ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.