ನವದೆಹಲಿ: 75ನೇ ಗಣರಾಜ್ಯೋತ್ಸವ ಅಂಗವಾಗಿ ಕರ್ತವ್ಯ ಪಥದಲ್ಲಿ ಶುಕ್ರವಾರ ನಡೆದ ಪಥಸಂಚಲನದ ವೇಳೆ ಆಕಾಶದಲ್ಲಿ ಯುದ್ಧವಿಮಾನಗಳು ಹಾರಾಟ ನಡೆಸಿ ಭಾರತದ ವಾಯುಸೇನೆ ಶಕ್ತಿ ಪ್ರದರ್ಶಿಸಿದವು. ಐಎಎಫ್ನ ಮಹಿಳಾ ಪೈಲಟ್ಗಳು ಫ್ಲೈಪಾಸ್ಟ್ ಸಮಯದಲ್ಲಿ ಯುದ್ಧವಿಮಾನಗಳ ಹಾರಾಟ ನಡೆಸಿ ತಾವೂ ಸಮರ್ಥರಿದ್ದೇವೆ ಎಂಬುದನ್ನು ಸಾಬೀತುಪಡಿಸಿದರು. ಪರಾಕ್ರಮ, ಕೌಶಲದ ಮಹಿಳಾ ಪೈಲಟ್ಗಳ ಪೈಕಿ ಮೈಸೂರಿನ ಅಸಾಧಾರಣ ಪ್ರತಿಭೆ, ಕೊಡಗಿನ ಕೊಲುವಂಡ ಪುಣ್ಯಾ ನಂಜಪ್ಪ ಯುದ್ಧ ವಿಮಾನ ಯಶಸ್ವಿ ಹಾರಾಟ ನಡೆಸಿ ಗಮನ ಸೆಳೆದಿದ್ದಾರೆ.
ಪುಣ್ಯಾ ನಂಜಪ್ಪ, MiG-29 ಫೈಟರ್ ಜೆಟ್ ಹಾರಾಟ ನಡೆಸಿ ವಾಯುಪಡೆಯ ನಾರಿ ಶಕ್ತಿ ಪ್ರದರ್ಶಿಸಿದರು. ವಾಯುಪಡೆಯ 46 ವಿಮಾನಗಳು ಆಕಾಶದಲ್ಲಿ ವಿವಿಧ ಕಸರತ್ತು ಪ್ರದರ್ಶಿಸಿದವು. 29 ಯುದ್ಧ ವಿಮಾನಗಳು, 7 ಸರಕು ಸಾಗಣೆ ವಿಮಾನಗಳು, 9 ಹೆಲಿಕಾಪ್ಟರ್ಗಳು ಕೂಡ ಪ್ರದರ್ಶನದಲ್ಲಿ ಭಾಗಿಯಾಗಿದ್ದವು
ಪುಣ್ಯ ಅವರು ವಿಜಯನಗರದ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕೋಲುವಂಡ ಅನುರಾಧಾ ನಂಜಪ್ಪ ಮತ್ತು ಪ್ರಭಾ ಥಿಯೇಟರ್ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದ ದಿವಂಗತ ಕೋಳುವಂಡ ಪಿ.ಬಾಲ ನಂಜಪ್ಪ ಅವರ ಪುತ್ರಿ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚಂಬೆಬೆಳ್ಳೂರಿನವರು.
ವಿಜಯನಗರದ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ನಲ್ಲಿ ಶಾಲಾ ಶಿಕ್ಷಣ, ಸರಸ್ವತಿಪುರಂನ ವಿಜಯ ವಿಟ್ಲ ಪಿಯು ಕಾಲೇಜಿನಲ್ಲಿ ಪಿಯುಸಿ ಮತ್ತು ಮೈಸೂರಿನ NIE ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಪುಣ್ಯಾ ಅವರು ಫ್ಲೈಯಿಂಗ್ ಬ್ರಾಂಚ್ನಲ್ಲಿ ಅಧಿಕಾರಿಗಳ ನೇಮಕಾತಿಗಾಗಿ ನಡೆಸಲಾಗಿದ್ದ ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ (AFCAT) ಪರೀಕ್ಷೆ ಬರೆದರು. 1,000 ಅಭ್ಯರ್ಥಿಗಳ ಶಾರ್ಟ್ಲಿಸ್ಟ್ನಲ್ಲಿ ಪುಣ್ಯಾ ನಂಜಪ್ಪ 135 ನೇ ಸ್ಥಾನ ಪಡೆದರು.