ADVERTISEMENT
ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಪ್ರಸಿದ್ಧ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ ಈಗ ಹೊಸ ರೂಪ ಪಡೆದುಕೊಂಡಿದೆ.
ತಾವು ಗೆದ್ದಿರುವ ಪದಕಗಳನ್ನು ಇವತ್ತು ಸಂಜೆ 6 ಗಂಟೆಗೆ ಗಂಗಾನದಿಯಲ್ಲಿ ವಿಸರ್ಜನೆ ಮಾಡುವುದಾಗಿ ಕುಸ್ತಿ ಪಟುಗಳ ಘೋಷಿಸಿದ್ದಾರೆ.
ಗಂಗಾನದಿಯಲ್ಲಿ ಪದಕಗಳನ್ನು ವಿಸರ್ಜನೆ ಮಾಡಿದ ಬಳಿಕ ಇವತ್ತೇ ಇಂಡಿಯಾ ಗೇಟ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೂರುವುದಾಗಿ ಕುಸ್ತಿ ಪಟುಗಳು ಘೋಷಿಸಿದ್ದಾರೆ.
ಈ ಬಗ್ಗೆ ಕುಸ್ತಿ ಪಟು ಸಾಕ್ಷಿ ಮಲ್ಲಿಕ್ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಈ ಪದಕಗಳು ನಮ್ಮ ಜೀವ ಮತ್ತು ನಮ್ಮ ಆತ್ಮ. ಆ ಪದಕಗಳನ್ನು ವಿಸರ್ಜನೆ ಮಾಡಿದ ಬಳಿಕ ಬದುಕುವುದರಲ್ಲಿ ಅರ್ಥ ಇರಲ್ಲ. ಹೀಗಾಗಿ ಪದಕ ವಿಸರ್ಜನೆ ಬಳಿಕ ನಾವು ಇಂಡಿಯಾ ಗೇಟ್ ಬಳಿ ಅಮರಣಾಂತ ಉಪವಾಸ ಕೈಗೊಳ್ಳುತ್ತೇವೆ
ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಬಗ್ಗೆ ಕಾಳಜಿ ತೋರಲಿಲ್ಲ. ಬದಲಿಗೆ ಸಂಸತ್ತಿನ ಹೊಸ ಕಟ್ಟಡ ಉದ್ಘಾಟನೆಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಆಹ್ವಾನಿಸಿದರು. ಆತ ಹೊಳೆಯುವ ಬಿಳಿ ಬಟ್ಟೆಯಲ್ಲಿ ಫೋಟೋಗಳಿಗೆ ಪೋಸ್ ಕೊಟ್ಟ. ಆತನ ಬಟ್ಟೆಯ ಹೊಳೆಪು ನಮ್ಮನ್ನು ಕುಟುಕುತ್ತಿದೆ
ಎಂದು ಸಾಕ್ಷಿ ಮಲಿಕ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉತ್ತರಪಪ್ರದೇಶದ ಬಿಜೆಪಿ ಸಂಸದನಾಗಿರುವ ಬ್ರಿಜ್ ಭೂಷಣ್ ಸರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ 7 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಲ್ಲಿ 1 ಪೋಕ್ಸೋ ಪ್ರಕರಣವೂ ಸೇರಿದೆ.
ಏಪ್ರಿಲ್ 23ರಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಕುಸ್ತಿಪಟುಗಳು ಕೈಗೊಂಡಿದ್ದ ಧರಣಿ ಸತ್ಯಾಗ್ರಹವನ್ನು ಮೇ 28ರಂದು ದೆಹಲಿ ಪೊಲೀಸರು ಹತ್ತಿಕ್ಕಿ ತೆರವುಗೊಳಿಸಿದ್ದರು.
ADVERTISEMENT