ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೊಟ್ಟಿದ್ದ ಹೇಳಿಕೆಯನ್ನು ತಿರುಚಿ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಪ್ರಮುಖ ಹಿಂದಿ ಸುದ್ದಿವಾಹಿನಿ ಝೀ ನ್ಯೂಸ್ ಕ್ಷಮೆಯಾಚಿಸಿದ್ದು, ತನ್ನ ಇಬ್ಬರು ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ.
ವಯನಾಡು ಲೋಕಸಭಾ ಕ್ಷೇತ್ರದಲ್ಲಿರುವ ತಮ್ಮ ಕಚೇರಿಗೆ ನುಗ್ಗಿ ಆಡಳಿತರೂಢ ಎಡಪಕ್ಷದ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿದ್ದರ ಹಿನ್ನೆಲೆಯಲ್ಲಿ ವಯನಾಡುವಿನಲ್ಲಿ ಬೃಹತ್ ರೋಡ್ ಶೋ ನಡೆಸಿದ್ದ ರಾಹುಲ್ ಗಾಂಧಿ ಆ ಬಳಿಕ ಪ್ರತಿಕ್ರಿಯಿಸಿದ್ದರು.
`ಅವರು ಮಕ್ಕಳು. ಅವರಿಗೆ ತಮ್ನ ಕೃತ್ಯದಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದಿಲ್ಲ. ಅವರನ್ನು ನಾನು ಕ್ಷಮಿಸುತ್ತೇನೆ‘ ಎಂದು ರಾಹುಲ್ ಪ್ರತಿಕ್ರಿಯಿಸಿದ್ದರು.
ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ತಿರುಚಿದ್ದ ಝೀ ನ್ಯೂಸ್ ಶುಕ್ರವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗುವ ಡೈಲಿ ನ್ಯೂಸ್ ಅನಾಲಿಸೀಸ್ (ಡಿಎನ್ಎ)ನಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿತ್ತು.
`ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಹತ್ಯೆ ಮಾಡಿದ್ದ ಇಬ್ಬರನ್ನು ರಾಹುಲ್ ಗಾಂಧಿ ಮಕ್ಕಳು ಎಂದು ಹೇಳಿದ್ದಾರೆ‘ ಎಂದು ಝೀ ನ್ಯೂಸ್ ಸುಳ್ಳು ಸುದ್ದಿ ಪ್ರಕಟಿಸಿತ್ತು.
`ಕೊನೆಯಲ್ಲಿ ನಿಮಗೆ ನಾವು ಮತ್ತೆ ರಾಹುಲ್ ಗಾಂಧಿ ಅವರ ಆ ಹೇಳಿಕೆಯನ್ನು ತೋರಿಸಲು ಬಯಸುತ್ತೇವೆ. ಉದಯಪುರ ಹತ್ಯಾಕಾಂಡದ ಆರೋಪಿಗಳನ್ನು ಮಕ್ಕಳೆಂದು ಹೇಳುತ್ತಿದ್ದಾರೆ. ಇವತ್ತು ನೀವು ನಿರ್ಧಾರ ಮಾಡ್ಬೇಕು, ಅವರು ಮಕ್ಕಳೋ, ಭಯೋತ್ಪಾದಕರೋ ಎಂದು‘
ಎಂದು ಡಿಎನ್ಎ ಆಂಕರ್ ರಂಜಿತ್ ರಂಜನ್ ಅವರು ರಾಹುಲ್ ಗಾಂಧಿ ಹೇಳಿಕೆಯನ್ನು ತಿರುಚಿ ಟಿಪ್ಪಣಿ ಮಾಡಿದ್ದರು.
ಈ ಸುಳ್ಳು ಸುದ್ದಿ ವಿರುದ್ಧ ಕಾಂಗ್ರೆಸ್ ಕಾನೂನು ಕ್ರಮದ ಮುನ್ನೆಚ್ಚರಿಕೆ ನೀಡಿದ ಬೆನ್ನಲ್ಲೇ ನಿನ್ನೆ ಬೆಳಗ್ಗೆಯೇ ಝೀ ನ್ಯೂಸ್ ತನ್ನ ಸ್ಪಷ್ಟನೆಯನ್ನು ಪ್ರಕಟಿಸಿತು.
`ನಿನ್ನೆ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಯನ್ನು ನಮ್ಮ ಕಾರ್ಯಕ್ರಮ ಡಿಎನ್ಎನಲ್ಲಿ ತಪ್ಪಾಗಿ ಪ್ರಸಾರವಾಗಿದೆ. ಆ ಬಗ್ಗೆ ನಮಗೆ ವಿಷಾದವಿದೆ’ ಎಂದು ಬೆಳಗ್ಗೆ ವಿಷಾದ ವ್ಯಕ್ತಪಡಿಸಿತ್ತು.
ನಿನ್ನೆ ರಾತ್ರಿ 9 ಗಂಟೆಗೆ ಪ್ರಸಾರವಾದ ಡಿಎನ್ಎ ಕಾರ್ಯಕ್ರಮದಲ್ಲಿ ಸ್ವತಃ ರಂಜಿತ್ ರಂಜನ್ ಸುಳ್ಳು ಸುದ್ದಿ ಬಗ್ಗೆ ಕ್ಷಮೆಯಾಚಿಸಿದ್ದಾರೆ.
`ರಾಹುಲ್ ಗಾಂಧಿ ವಯನಾಡುವಿನ ಸನ್ಮಾನಿತ ಸಂಸದರು, ಕಾಂಗ್ರೆಸ್ ನಾಯಕರು. ಅವರ ಘನತೆಗೆ ಧಕ್ಕೆ ತರುವ ಯಾವುದೇ ಚೇಷ್ಟೆ ಮಾಡಿಲ್ಲ. ಈ ಬಗ್ಗೆ ತಪ್ಪನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಡಿಎನ್ಎ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ತಪ್ಪಿಗೆ ಕಾರಣರಾದ ಇಬ್ಬರನ್ನು ಅವರ ಹುದ್ದೆಯಿಂದ ತೆಗೆದುಹಾಕಿದ್ದೇವೆ‘ ಎಂದು ರಂಜಿತ್ ರಂಜನ್ ಅವರು ಹೇಳಿಕೆ ನೀಡಿದ್ದಾರೆ.
ಸುಳ್ಳು ಸುದ್ದಿ ಟ್ವೀಟಿಸಿದ್ದ ಬಿಜೆಪಿ ನಾಯಕರು:
`ರಾಜಸ್ಥಾನದ ಉದಯಪುರದ ಹತ್ಯಾಕಾಂಡದ ಆರೋಪಿಗಳನ್ನು ಮಕ್ಕಳೆಂದು ರಾಹುಲ್ ಗಾಂಧಿ ಹೇಳಿದ್ದಾರೆ‘ ಎಂದು ಬಿಜೆಪಿ ಸಂಸದ ರಾಜವರ್ಧನ್ ಸಿಂಗ್ ರಾಥೋಡ್, ಸಂಸದ ಸುಬ್ರತ್ ಪಾಠಕ್, ಶಾಸಕ ಕಮಲೇಶ್ ಶೈನಿ ಅವರು ಸೇರಿದಂತೆ ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಝೀ ನ್ಯೂಸ್ ಪ್ರಸಾರ ಮಾಡಿದ್ದ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದರು. ಈ ಬಗ್ಗೆಯೂ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಂ ರಮೇಶ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಪತ್ರ ಮೂಲಕ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು.
ತಿರುಚಿದ ವೀಡಿಯೋವನ್ನು ಹಂಚಿಕೊಂಡಿದ್ದರ ಸಂಬಂಧ ಕ್ಷಮೆಯಾಚಿಸುವಂತೆ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪತ್ರದ ಮೂಲಕ ಆಗ್ರಹಿಸಿದೆ.