ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾದ ರಾಯಚೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ; ಬೆಂಗಳೂರಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ರಕ್ಷಣಾ ಸಮಿತಿಯು ಶನಿವಾರದಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ ದಲಿತರ ಆಕ್ರೋಶದ ರಣಕಹಳೆಯನ್ನು ಮೊಳಗಿಸಿವೆ.
ಜ. 26 ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಂಬೇಡ್ಕರ್ ಫೋಟೋವನ್ನು ರಾಯಚೂರಿನ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ಅವರು ತೆಗೆಸಿದ್ದಾರೆ ಎಂದು ವೀಡಿಯೋ ವೈರಲ್ ಆಗಿತ್ತು. ಆ ಬೆನ್ನಲ್ಲೇ, ರಾಜ್ಯಾದ್ಯಂತ ದಲಿತ ಸಂಘಟನೆಗಳು ನ್ಯಾಯಾಧೀಶರ ಈ ಕ್ರಮದ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿದ್ದವು.
ಇಂದು ದಲಿತ ಸಂಘಟನೆಗಳು ಹಾಗೂ ಸಂವಿಧಾನ ರಕ್ಷಣಾ ಸಮಿತಿ ಕರ್ನಾಟಕ ವಿಭಾಗದ ಸದಸ್ಯರು ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡರನ್ನು ವಜಾಗೊಳಿಸುವಂತೆ ಕೇಂದ್ರ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ವೆರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರೆವಣಿಗೆಯಲ್ಲಿ ಸಹಸ್ರಾರು ಜನರ ಸೇರಿದ್ದರು. ದಾರಿಯುದ್ದಕ್ಕೂ ಜೈ ಭೀಮ್ ಘೋಷಣೆಗಳು ಹಾಗೂ ನೀಲಿ ಬಾವುಟಗಳು ರಾರಾಜಿಸಿದವು. ಅಂಬೇಡ್ಕರ್ ಅಪಮಾನಕ್ಕೆ ಈ ಹೋರಾಟವು ಎಚ್ಚರಿಕೆಯ ಕರೆಘಂಟೆಯಂತಿತ್ತು.
ಮನವಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ :
ಫ್ರೀಡಂ ಪಾರ್ಕ್ನ ಪ್ರತಿಭಟನಾ ಸ್ಥಳಕ್ಕೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಬಂದು ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರ ತೆರವು ಮಾಡಿ ಅಪಮಾನ ಮಾಡಿದ ಘಟನೆ ನಮ್ಮ ಕಣ್ಣು ತೆರೆಸಿದೆ. ಈ ಸಂಬಂಧ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಇನ್ನು, ಸ್ವತಃ ಸಿಎಂ ಅವರೇ ಬಂದು ಮನವಿಯನ್ನು ಆಲಿಸಿರುವುದಕ್ಕೆ ದಲಿತ ಮುಖಂಡರು ಬೊಮ್ಮಾಯಿಯವರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.