ಉತ್ತರ ಪ್ರದೇಶದ ಕರ್ಹಾಲ್ ಮತ್ತು ಜಸ್ವಂತ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ವಿರುದ್ಧ ಕಾಂಗ್ರೆಸ್ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಈ ಎರಡು ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು.
2019ರ ಸಾರ್ವತ್ರಿಕ ಚುನಾವಣೆಯಲ್ಲೂ ಸಮಾಜವಾದಿ ಪಕ್ಷ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ರಾಯ್ ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಪರಸ್ಪರ ಗೌರವದ ಸೂಚಕವಾಗಿ ಕಾಂಗ್ರೆಸ್ ಈ ಇಬ್ಬರ ವಿರುದ್ಧ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.
ಕಾಂಗ್ರೆಸ್ನ ಇಟಾವಾ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಖಾನ್ ಸಿಂಗ್ ಮಾತನಾಡಿ, ಸ್ಥಳೀಯ ಘಟಕವು ಜಸ್ವಂತ್ ನಗರ ಸ್ಥಾನಕ್ಕೆ ಆರು ಹೆಸರುಗಳ ಪಟ್ಟಿಯನ್ನು ಕಳುಹಿಸಿತ್ತು. ಆದರೆ ಪಕ್ಷದ ಹೈಕಮಾಂಡ್ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಯನ್ನು ಅನುಮೋದಿಸಿಲ್ಲ ಎಂದಿದ್ದಾರೆ.
ನಮ್ಮ ನಾಯಕರ ವಿರುದ್ಧ ಎಸ್ಪಿ ಹಿರಿಯ ನಾಯಕ ಮುಲಾಯಂ ಸಿಂಗ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಈಗ ಕಾಂಗ್ರೆಸ್ ಸಹ ಕರ್ಹಾಲ್ನಲ್ಲಿ ಅಖಿಲೇಶ್ ಯಾದವ್ ವಿರುದ್ಧ ಯಾರನ್ನೂ ಕಣಕ್ಕಿಳಿಸದಂತೆ ಪಕ್ಷದ ಉನ್ನತ ನಾಯಕ ಸೂಚಿಸಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪ್ರಧಾನ್ ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಈ ಹಿಂದೆ ಕರ್ಹಾಲ್ ವಿಧಾನಸಭಾ ಸ್ಥಾನಕ್ಕೆ ಜ್ಞಾನವತಿ ಯಾದವ್ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೆ ಅಖಿಲೇಶ್ ಯಾದವ್ ಅವರು ಅಲ್ಲಿ ನಾಮಪತ್ರ ಸಲ್ಲಿಸಿದ ನಂತರ ಪಕ್ಷ ಅವರ ಉಮೇದುವಾರಿಕೆಯನ್ನು ಹಿಂಪಡೆಯಲು ನಿರ್ಧರಿಸಿತು ಎಂದು ಪ್ರಧಾನ್ ತಿಳಿಸಿದ್ದಾರೆ.