ಕಂಗನಾ ರನೌತ್ ಸೆಲೆಬ್ರಿಟಿಯಾಗಿರಬಹುದು, ವೃತ್ತಿಪರ ಹುದ್ದೆಗಳನ್ನು ಹೊಂದಿರಬಹುದು, ಆದರೆ ಅವರು ಪ್ರಕರಣವೊಂದರಲ್ಲಿ ಆರೋಪಿ ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದು ಮುಂಬೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಹೇಳಿದೆ.
ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಹಾಜರಾಗಲು ಶಾಶ್ವತ ವಿನಾಯಿತಿ ನೀಡುವಂತೆ ಕಂಗನಾ ಅವರು ಮನವಿ ಮಾಡಿದ್ದರು. ಹಿಂದಿ ಸಿನಿಮಾ ಕ್ಷೇತ್ರದ ದೊಡ್ಡ ನಟಿಯರ ಪೈಕಿ ತಾವು ಒಬ್ಬರಾಗಿದ್ದು, ದೇಶ ಮತ್ತು ವಿದೇಶದ ವಿವಿಧ ಭಾಗಗಳಿಗೆ ಸಂಚರಿಸುತ್ತಿರಬೇಕಾಗುತ್ತದೆ. ಹಾಗಾಗಿ ಕೋರ್ಟ್ಗೆ ಹಾಜರಾಗುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ನಟಿಯ ಮನವಿ ತಿರಸ್ಕರಿಸಿದ ಸ್ಥಳೀಯ ನ್ಯಾಯಾಲಯ, ಕಂಗನಾ ಸೆಲೆಬ್ರಿಟಿಯಾದ ಕಾರಣ ವಿಚಾರಣೆಯ ಹಾಜರಾತಿಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದಿದೆ.
ಕಂಗನಾ ಅವರು ತಮ್ಮ ವೃತ್ತಿಪರ ಬದ್ಧತೆಗಳನ್ನು ಉಲ್ಲೇಖಿಸಿ ವಿಚಾರಣೆಗೆ ಹಾಜರಾಗಲು ಶಾಶ್ವತ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಕೋರ್ಟ್ ನ ವಿವರವಾದ ಆದೇಶವು ಗುರುವಾರ ಲಭ್ಯವಾಗಿದೆ.
ಆರೋಪಿಯು ತನಗಿಷ್ಟವಾದ ರೀತಿಯಲ್ಲಿ ಈ ಪ್ರಕರಣದ ವಿಚಾರಣೆಗೆ ತನ್ನದೇ ಆದ ನಿಯಮಗಳನ್ನು ನಿರ್ದೇಶಿಸುತ್ತಿದ್ದಾರೆ. ಆದರೆ ಆರೋಪಿಯು ಶಾಶ್ವತ ವಿನಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ. ಆರೋಪಿಯು ಕಾನೂನಿನ ನೀತಿ-ನಿಯಮಗಳನ್ನು ಅನುಸರಿಸಬೇಕು ಎಂದಿದೆ. ಇದುವರೆಗೆ ಗೈರಾದ ದಿನಾಂಕಗಳಿಗೆ ಕಂಗನಾರ ಕೋರಿಕೆ ಮೇರೆಗೆ ಯಾವುದೇ ದಂಡ ವಿಧಿಸದೆ ಅನುಮತಿ ನೀಡಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ಆರ್ ಆರ್ ಖಾನ್ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ವಾಹಿನಿಯೊಂದರ ಸಂದರ್ಶನವೊಂದರ ಕಂಗನಾ ರಣಾವತ್ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ತಮ್ಮ ಘನತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಜಾವೇದ್ ಅಖ್ತರ್ ಅವರು 2020ರಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.