ಇಂದು ಭಾನುವಾರ ಭಾರತ ಹಾಗೂ ಶ್ರೀಲಂಕಾದ ನಡುವೆ ಟಿ-20 3ನೇ ಪಂದ್ಯದ ನಂತರ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಗೆ ಭಾರತ ಹಾಗೂ ಶ್ರೀಲಂಕಾ ತಂಡದ ಬಹುತೇಕ ಆಟಗಾರರು ಈಗಾಗಲೇ ಚಂಡೀಗಡ ತಲುಪಿದ್ದಾರೆ. ಭಾರತ ತಂಡದ ಆಟಗಾರರನ್ನು ಹೋಟೆಲ್ನಿಂದ ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕೆ ಕರೆದೊಯ್ಯುವ ಬಸ್ನಲ್ಲಿ ಎರಡು ಪಿಸ್ತೂಲ್ಗೆ ಬಳಸುವ ಮದ್ದು ಗುಂಡುಗಳು ಪತ್ತೆಯಾಗಿದ್ದು, ಇದರಿಂದ ಸ್ಥಳದಲ್ಲಿ ಸಂಚಲನ ಸೃಷ್ಠಿಯಾಗಿದೆ.
ದಿ ಟೈಮ್ಸ್ ಆಫ್ ಇಂಡಿಯಾ ಸುದ್ದಿ ಪ್ರಕಾರ, ಆಟಗಾರರನ್ನು ಕ್ರೀಡಾಂಗಣಕ್ಕೆ ಬಿಡುವ ಬಸ್ನಲ್ಲಿ ಕಂಡುಬಂದ ಮದ್ದು ಗುಂಡುಗಳು 32 ಬೋರ್ ಪಿಸ್ತೂಲ್ಗೆ ಬಳಸಬಹುದಾಗಿದೆ. ತಾರಾ ಬ್ರದರ್ಸ್ನ ಈ ಬಸ್ ಐಟಿ ಪಾರ್ಕ್ನಲ್ಲಿರುವ ಹೋಟೆಲ್ ಲಲಿತ್ ಹೊರಗೆ ನಿಂತಿದ್ದು, ಅಲ್ಲಿ ಎರಡೂ ತಂಡಗಳ ಆಟಗಾರರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ.
ತಂಡದ ಬಸ್ನಲ್ಲಿ ಕಾರ್ಟ್ರಿಡ್ಜ್ ಶೆಲ್(ಗುಂಡುಗಳ)ನ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಬಾಂಬ್ ಶ್ವಾನ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಡಿಡಿಆರ್ ದಾಖಲಿಸಿಕೊಂಡಿದ್ದಾರೆ. ಬಸ್ಸಿನಲ್ಲಿ ಕಾರ್ಟ್ರಿಡ್ಜ್ ಶೆಲ್ ಪತ್ತೆಯಾದ ನಂತರ, ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿಯೂ ತನಿಖೆ ನಡೆಸಲಾಯಿತು. ಸದ್ಯ ಪೊಲೀಸರು ಪತ್ತೆಯಾದ ಎರಡೂ ಕಾಟ್ರಿಡ್ಜ್ಗಳ ಶೆಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆಟಗಾರರಿಗೆ ಮತ್ತೊಂದು ಬಸ್ನ ವ್ಯವಸ್ಥೆ ಮಾಡಲಾಗಿದೆ.
ಆರ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶುಭಮನ್ ಗಿಲ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ಉಮೇಶ್ ಯಾದವ್, ಜಯಂತ್ ಯಾದವ್, ಸೌರಭ್ ಕುಮಾರ್ ಮತ್ತು ಕೆಎಸ್ ಭರತ್ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯಗಳನ್ನು ಆಡಲು ಹೋಟೆಲ್ ಲಲಿತ್ನಲ್ಲಿ ತಂಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಕೂಡ ಶನಿವಾರ ಚಂಡೀಗಢಕ್ಕೆ ಬಂದಿದ್ದಾರೆ.
ಈಗಾಗಲೇ ಶ್ರೀಲಂಕಾ ವಿರುದ್ಧ 2 ಟಿ-20 ಪಂದ್ಯಗಳಲ್ಲಿ ವಿಜಯ ಸಾಧಿಸಿರುವ ಟೀಂ ಇಂಡಿಯಾ 3ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಕ್ಲೀನ್ ಸ್ವಿಪ್ ಮಾಡುವ ಭರವಸೆಯಲ್ಲಿದೆ.