ಪಾವಗಡ ಗಡಿನಾಡು.. ವಾಣಿಜ್ಯ ವ್ಯವಹಾರಗಳ ದೃಷ್ಟಿಯಿಂದ ಮುಂದೆ ಇದ್ದರೂ, ಮೂಲ ಭೂತ ಸೌಕರ್ಯಗಳ ದೃಷ್ಟಿಯಿಂದ ತೀರಾ ಹಿಂದೆ ಉಳಿದಿದೆ.
ಪಾವಗಡ ನಾಗರಿಕರ ಭಾರಿ ಹೋರಾಟದ ಬಳಿಕ ತಾಲೂಕು ಕೇಂದ್ರದಲ್ಲಿ KSRTC ಬಸ್ ಡಿಪೋ ಸ್ಥಾಪನೆ ಆಗಿದೆ. ಆದರೆ ಹೆಚ್ಚಿನ ಸಂಖ್ಯೆಯ ಬಸ್ ಗಳು ಪಾವಗಡ – ಬೆಂಗಳೂರು ಮಾರ್ಗದಲ್ಲಷ್ಟೇ ಸಂಚಾರ ಮಾಡುತ್ತವೆ. ಪಾವಗಡ ತಾಲೂಕಿನ ಬಹುತೇಕ ಮಾರ್ಗಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಸರ್ಕಾರಿ ಬಸ್ ಸಂಚರಿಸುತ್ತವೆ.
ಪಾವಗಡ ತಾಲೂಕಿನ ಜೀವನಾಡಿ ಆಗಿರುವ ಖಾಸಗಿ ಬಸ್ ಗಳು ಕೋವಿಡ್ ಕಾಲಘಟ್ಟದಲ್ಲಿ ಬಸವಳಿದು ಅರ್ಧಕ್ಕರ್ಧ ಸಂಚಾರ ನಿಲ್ಲಿಸಿವೆ. ಕೆಲವೇ ಬಸ್ ಗಳು ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುತ್ತವೆ. ಸಹಜವಾಗಿಯೇ ಪೀಕ್ ಹವರ್ ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚು.. ಕೆಲವೊಮ್ಮೆ ಟಾಪ್ ಮೇಲೆ ಕುಳಿತು ಪಯಣಿಸಬೇಕಾದ ಅನಿವಾರ್ಯತೆ. ಸಂತೆ ನಡೆಯುವ ಸೋಮವಾರದ ದಿನವಂತೂ ಪ್ರತಿಯೊಂದು ಬಸ್ ಟಾಪ್ ಲೋಡ್ ಆಗುತ್ತವೆ.
ಬಸ್ ಸೌಲಭ್ಯ ಇಲ್ಲದೆ ಇಂದಿಗೂ ಅದೆಷ್ಟೋ ಹಳ್ಳಿಗಳ ಬಡ ಜನತೆ ಲಗ್ಗೆಜ್ ಅಟೋಗಳನ್ನು ಅವಲಂಬಿಸಿದ್ದಾರೆ. ಕುರಿಗಳನ್ನು ತುಂಬಿದಂತೆ ಜನರನ್ನು ಆಟೋದಲ್ಲಿ ಸಾಗಿಸಲಾಗುತ್ತದೆ.
ಗ್ರಾಮೀಣ ಜನತೆ ನಮ್ಮೂರ್ ಗೆ ಬಸ್ ಬಿಡಿ ಎಂದು ಅರ್ಜಿ ಮೇಲೆ ಅರ್ಜಿ ಬರೆದು ಸುಸ್ತಾಗಿದ್ದಾರೆ. ಡಿಪೋ ಇರುವ ತಾಲೂಕಿನಲ್ಲಿ ಸರ್ಕಾರಿ ಬಸ್ ನಿಲ್ದಾಣ ಇಲ್ಲ ಎಂದರೇ ಊಹಿಸಿಕೊಳ್ಳಿ.
ಶಾಸಕರು ಜನತೆ ಪಾಲಿಗೆ ಇದ್ದು ಇಲ್ಲದಂತಾಗಿದ್ದಾರೆ. ಜನರ ಗೋಳು ಕೇಳುತ್ತಿಲ್ಲ.. ಅವರು ಗುತ್ತಿಗೆ ಮೇಲೆ ಗುತ್ತಿಗೆ ಹಿಡಿದು ಅವರು ಅಭಿವೃದ್ಧಿ ಆಗಿದ್ದು ಬಿಟ್ಟರೆ, ತಾಲೂಕು ಅಭಿವೃದ್ಧಿ ಆಗಲಿಲ್ಲ ಎಂಬುದು ಬಹುತೇಕರ ಆರೋಪ.