ಚೆನ್ನೈ- ಪ್ರೇಯಸಿಯನ್ನು ಕೊಂದು ಆಕೆಯ ಮೃತದೇಹದ ಫೋಟೋವನ್ನು ವಾಟ್ಸಪ್ ಸ್ಟೇಟಸ್ ಹಾಕಿದ ಪ್ರಿಯಕರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಚೆನ್ನೈನ ಚೊರ್ಮೆಪೇಟ್ ಬಳಿ ಈ ಘಟನೆ ನಡೆದಿದ್ದು ಫೌಜಿಯಾ(20) ಕೊಲೆಯಾದ ಯುವತಿಯಾಗಿದ್ದಾಳೆ. ಫೌಜಿಯಾ ಮತ್ತು ಆರೋಪಿ ಆಶಿಕ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಆಶಿಕ್ ಮತ್ತೋರ್ವ ಯುವತಿಯೊಂದಿಗಿದ್ದ ಫೋಟೋ ಕುರಿತಾಗಿ ಫೌಜಿಯಾ ಪ್ರಶ್ನಿಸಿದ್ದಾಳೆ. ಈ ವೇಳೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಆಶಿಕ್ ತನ್ನ ಟೀ-ಶರ್ಟ್ ನಿಂದ ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಕೊಲೆ ಮಾಡಿದ ಬಳಿಕ ಆಕೆಯ ಶವದ ಫೋಟೋ ತೆಗೆದು ಅದನ್ನು ವಾಟ್ಸಾಪ್ ಸ್ಟೇಟಸ್ ಗೆ ಹಾಕಿಕೊಂಡಿದ್ದಾನೆ.
ಆರೋಪಿಯ ವಾಟ್ಸಾಪ್ ಸ್ಟೇಟಸ್ ನೋಡಿ ಹೌಹಾರಿದ ಮೃತ ಫೌಜಿಯಾ ಸ್ನೇಹಿತೆಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿ ಆಶಿಕ್ ನನ್ನ ಕೆಲವೇ ಗಂಟೆಗಳಲ್ಲಿ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.