ಕರಾವಳಿ ಭಾಗದಲ್ಲಿನ ಜಾತ್ರೋತ್ಸವದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ವಿಧಿಸುವ ಪ್ರಕರಣಗಳು ಹೆಚ್ಚುತ್ತಿವೆ.
ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಹಿಂದೂಯೇತರರಿಗೆ ಜಾತ್ರೆಯಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಹಾಕಲು ನಿರ್ಬಂಧಿಸಿದ ಬೆನ್ನಲ್ಲೇ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ರದ್ದು ಮಾಡಿರುವ ಪ್ರಕರಣ ವರದಿಯಾಗಿದೆ.
ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು, ಸಂವಿಧಾನಕ್ಕೆ ವಿರುದ್ಧವಾದವರಿಗೆ, ಮತಾಂಧರಿಗೆ ಹಾಗೂ ಗೋ ಕಟುಕರಿಗೆ ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸುವುದಿಲ್ಲ ಹಾಗೂ ವ್ಯಾಪಾರ ನಡೆಸಲು ಅವಕಾಶ ನೀಡಲ್ಲ ಎಂದು ಬರೆಯಲಾಗಿದೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿದ್ದು, ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎಂಬ ವಿಚಾರವಾಗಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತಹಶಿಲ್ದಾರ್ ಜೊತೆ ಮಾತನಾಡಿದ್ದೇವೆ. ಬ್ಯಾನರ್ ಯಾರು ಹಾಕಿದ್ದಾರೆ ಎಂಬುವದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಆಡಳಿತ ಮಂಡಳಿ ಈ ಬಗ್ಗೆ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ.
ಬಪ್ಪನಾಡು ಆಡಳಿತ ಮಂಡಳಿ ನಿಯಮದ ಪ್ರಕಾರ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ. ಈ ಬಗ್ಗೆ ಕಾನೂನು ತಜ್ಞರ ಬಳಿ ಮಾಹಿತಿ ಕೇಳಿದ್ದೇವೆ ಎಂದು ಎಸ್ಪಿ ಎನ್.ಶಶಿಕುಮಾರ್ ಹೇಳಿದ್ದಾರೆ.
https://youtu.be/ZR4gDXUKZ98