ಮಂಗಳೂರಿನ ಪ್ರತಿಷ್ಠಿತ ಸಂತ ಆಗ್ನೆಸ್ ಕಾಲೇಜಿನಲ್ಲಿ ಈವರೆಗೆ ಹೆಣ್ಮಕ್ಕಳಿಗೆ ಕಲಿಯಲು ಅವಕಾಶ ಇತ್ತು. ಆದ್ರೆ ಇನ್ಮುಂದೆ ಹುಡುಗರಿಗೆ ಕೂಡಾ ಇಲ್ಲಿ ಪದವಿ ಕಲಿಯಲು ಅವಕಾಶ ಇದೆ. ಹೌದು.
ದಕ್ಷಿಣ ಭಾರತದ ಹೆಣ್ಣುಮಕ್ಕಳಿಗೆ ಒಂದು ಶತಮಾನದಿಂದಲೂ ಗುಣಮಟ್ಟದ ಉನ್ನತ ಈ ಕಾಲೇಜು ಶಿಕ್ಷಣವನ್ನು ನೀಡುತ್ತಿದೆ. ಜಗತ್ತಿನಾದ್ಯಂತ ಶಿಕ್ಷಣ ತಜ್ಞರು, ವಿಜ್ಞಾನಿಗಳು, ಚಾರ್ಟೆಡ್ ಅಕೌಂಟೆಂಟ್ಗಳು, ಮ್ಯಾನೇಜ್ಮೆಂಟ್ ಮತ್ತು ಸೇವಾ ವೃತ್ತಿಪರರಾಗಿ ವಿಶಿಷ್ಟ ಸ್ಥಾನಗಳನ್ನು ಹೊಂದಿರುವ ಸಾವಿರಾರು ಮಂದಿ ಮಹಿಳೆಯರು ಕಾಲೇಜಿನ ಖ್ಯಾತಿಗೆ ಸಾಕ್ಷಿಯಾಗಿದ್ದಾರೆ. ಇದು ಒಂದು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ, ಸಂತ ಆಗ್ನೆಸ್ ಕಾಲೇಜು ವಿವಿಧ ವೃತ್ತಿಪರ ಕೋರ್ಸ್ಗಳನ್ನು ಪರಿಚಯಿಸುವ ಮತ್ತು ನಡೆಸುವ ಸೌಲಭ್ಯ ಹೊಂದಿದೆ.
ವರ್ಷಪೂರ್ತಿ ಇತರ ನಿಯಮಿತ ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನದ ಸೂಕ್ತ ನವೀನ ವಿಧಾನಗಳನ್ನು ಅಳವಡಿಸಿಕೊಂಡಿದೆ. ಸಮಾಜದ ಸಮಕಾಲೀನ ಅಗತ್ಯತೆಗಳು ಮತ್ತು ಉದ್ಯೋಗ ಮಾರುಕಟ್ಟೆಯ ಬೇಡಿಕೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಸಲುವಾಗಿ ಪಠೇತರ ಚಟುವಟಿಕೆಗಳು, ಪಠ್ಯಪೂರಕ ಅಧ್ಯಯನ ಮತ್ತು ಕೌಶಲ್ಯ ಆಧಾರಿತ ಕಾರ್ಯಕ್ರಮಗಳನ್ನೂ ಸಂಯೋಜಿಸುತ್ತಿದೆ.
ಸ್ನಾತಕೋತ್ತರ ವಿಭಾಗದಲ್ಲಿ ಈಗಾಗಲೇ ಕೋಎಜುಕೇಶನ್ ಹೊಂದಿರುವ ಸಂತ
ಆಗ್ನೇಸ್ ಕಾಲೇಜು, ತನ್ನ ಶತಮಾನೋತ್ಸವ ನಂತರದ ಮಹತ್ವದ ಹೆಜ್ಜೆಯಾಗಿ ಪದವಿ ಮಟ್ಟವನ್ನೂ ಹುಡುಗರಿಗೆ ವಿಸ್ತರಿಸಲು ನಿರ್ಣಯಿಸಿದೆ.
ಕಾಲೇಜು ಮೌಲ್ಯಾಧಾರಿತ ಮಾದರಿಯಲ್ಲಿ ಸಾಮಾಜಿಕವಾಗಿ ಪ್ರಸ್ತುತವಾಗುವ ಮತ್ತು ಜಾಗತಿಕವಾಗಿರುವ ಸ್ಪರ್ಧಾತ್ಮಕತೆಯನ್ನು ಎದುರಿಸಲು ಬೇಕಾದ ಪರಿಪೂರ್ಣ ಪ್ರಮಾಣದ ವಿದ್ಯಾಭ್ಯಾಸ ವ್ಯವಸ್ಥೆಯನ್ನು ಹುಡುಗ – ಹುಡುಗಿಯರಿಬ್ಬರಿಗೂ ನೀಡಲು ಇದರಿಂದ ಸಾಧ್ಯವಾಗುತ್ತದೆ.
ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಂದ ಈಗಾಗಲೇ ಅನುಮತಿ ಗಳಿಸಿರುವ ಹಿನ್ನಲೆಯಲ್ಲಿ ಇದೀಗ 2022-2023ನೇ ಶೈಕ್ಷಣಿಕ ವರ್ಷಕ್ಕಾಗುವಾಗ ಹುಡುಗರನ್ನು ಸ್ವಾಗತಿಸಲು ಕಾಲೇಜು ಅಧಿಕೃತವಾಗಿ ಸಜ್ಜಾಗಿದೆ. ಈ ಕುರಿತು ಕಾಲೇಜ್ ಆಡಳಿತ ಮಂಡಳಿ ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ಮಾಹಿತಿ ನೀಡಿತು.