ಮಂಗಳೂರು: ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರನ್ನಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್, sdpi ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು ಸಾಮಾನ್ಯ ಸಭೆಯು ಗದ್ದಲಕ್ಕೆ ಕಾರಣವಾಯಿತು.
ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರಿಡುವ ಪ್ರಸ್ತಾಪವನ್ನು ಪಾಲಿಕೆಯ ಹಿಂದಿನ ಸಾಮಾನ್ಯ ಸಭೆಯ ಕಾರ್ಯಸೂಚಿಗೆ ಸೇರಿಸಲಾಗಿದ್ದು, ಈ ಸಂಬಂಧ ಚರ್ಚೆಗೆ ಅವಕಾಶವನ್ನು ನೀಡಲಾಗಿಲ್ಲ ಎಂದು ಪ್ರತಿಪಕ್ಷಗಳು ದೂರಿದ್ದವು.
ಈ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಆ ನಿರ್ಣಯವನ್ನು ಖಚಿತಪಡಿಸುವ ಮೊದಲು ಕಾಂಗ್ರೆಸ್ ಪಕ್ಷದ ವಿರೋಧವನ್ನು ಉಲ್ಲೇಖಿಸಬೇಕೆಂದು ವಿಪಕ್ಷ ನಾಯಕ ನವೀನ್ ಡಿಸೋಜಾ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎಸ್ ಡಿಪಿಐ ಸದಸ್ಯರಾದ ಸಂಶಾದ್ ಅಬೂಬಕ್ಕರ್, ಮುಜೀಬ್ ಬೆಂಗ್ರೆ ಅವರು ಪಾಲಿಕೆಯ ಪ್ರಸ್ತಾಪವನ್ನು ವಿರೋಧಿಸಿ ಘೋಷಣೆ ಕೂಗಿದರು.
ಮತ್ತೋರ್ವ ಕಾಂಗ್ರೆಸ್ ಸದಸ್ಯ ಅಬ್ದುಲ್ ರವೂಫ್ ಪ್ರತಿಕ್ರಿಯಿಸಿ, ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕೊನೆಯ ಕ್ಷಣದ ಕಾರ್ಯಸೂಚಿಯನ್ನು ಒಪ್ಪಬಹುದು. ಆದರೆ ಇಂತಹ ಕ್ಷುಲ್ಲಕ ವಿಚಾರವನ್ನು ಕೊನೆಯ ಕ್ಷಣದ ಕಾರ್ಯಸೂಚಿಗೆ ಸೇರಿಸುವುದು ಸರಿಯಲ್ಲ ಎಂದರಲ್ಲದೆ, ಆಡಳಿತ ಪಕ್ಷದ ನಡೆಯನ್ನು ಖಂಡಿಸಿದರು.