ಮಣಿಪುರ ವಿಧಾನಸಭಾ ಎರಡನೇ ಹಂತದ ಚುನಾವಣೆಯಲ್ಲಿ ನಡೆದ ಹಿಂಸಾಚಾರ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲೂ ಒಬ್ಬ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದರು.
ಮಣಿಪುರದ ಸೇನಾಪತಿ ಜಿಲ್ಲೆಯ ಕರೋಂಗ್ ಕ್ಷೇತ್ರದ 47/49 ಸಂಖ್ಯೆಯ ಮತಗಟ್ಟೆ ಕೇಂದ್ರದ ಬಳಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಿಜೆಪಿ ಕಾರ್ಯಕರ್ತ 25 ವರ್ಷದ ಎಲ್ ಅಮುಬಾ ಸಿಂಗ್ ನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಕೊಲೆ ಸಂಬಂಧ ಕಾಂಗ್ರೆಸ್ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ ಇಬ್ಬರು ವ್ಯಕ್ತಿಗಳು ಮತಗಟ್ಟೆಯಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುವ ವೇಳೆ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದರು. ಇದರ ಪರಿಣಾಮವಾಗಿ ಓರ್ವ ಸಾವನ್ನಪ್ಪಿದ್ದು ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿಯ ಚುನಾವಣಾ ಏಜೆಂಟ್ ನ್ಗಾವೊನಿ ಆರ್ ಜೇಮ್ಸ್, ಜೊನಾಥನ್ ತಾವೊ ಅವರು ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ ಮೃತ ಕೆ ಲಾಂಗ್ವಾವೊ ಮತ್ತು ತೀವ್ರವಾಗಿ ಗಾಯಗೊಂಡ ವಿ.ಸೋಪೆ ಅವರನ್ನು ಯಾವುದೇ ಸೂಚನೆಯಿಲ್ಲದೆ ಗುಂಡು ಹಾರಿಸಲಾಗಿದೆ. ನ್ಯಾಯ ಸಿಗುವವರೆಗೂ ಘಟನೆ ನಡೆದ ಮತಗಟ್ಟೆಯಿಂದ ಭದ್ರತಾ ಪಡೆಗಳಿಗೆ ತೆರಳಲು ಬಿಡುವುದಿಲ್ಲ ಮತಗಟ್ಟೆಯಲ್ಲಿ ಮತದಾನ ಸ್ಥಗಿತಗೊಂಡಿತ್ತು ಎಂದು ಹೇಳಿದ್ದಾರೆ.
ಬಿಜೆಪಿಯ ಮಾಜಿ ವಕ್ತಾರ ಚಿ ಬಿಜೋಯ್ ಅವರ ಇಂಫಾಲ ನಿವಾಸದ ಬಳಿ ಶುಕ್ರವಾರ ರಾತ್ರಿ ಬಾಂಬ್ ಸ್ಫೋಟ ಸಂಭವಿಸಿದೆ. ಉರಿಪೋಕ್ ಕ್ಷೇತ್ರದ ಟಿಕೆಟ್ ನಿರಾಕರಿಸಿದ ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೆಲವು ಅಭ್ಯರ್ಥಿಗಳ ಬೆಂಬಲಿಗರ ನಡುವಿನ ಘರ್ಷಣೆಯ ನಂತರ ಮಾವೋ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಚುನಾವಣಾ ಚಟುವಟಿಕೆಗಳು ಅಸ್ತವ್ಯಸ್ತಗೊಂಡವು.
ಎರಡನೇ ಹಂತದಲ್ಲಿ 22 ಕ್ಷೇತ್ರಗಳಲ್ಲಿ ಮತದಾನ 11 ಗಂಟೆಗೆ ಶೇ. 28.19 ರಷ್ಟಾಗಿದೆ. ಫೆಬ್ರವರಿ 28ರಂದು ಮೊದಲ ಸುತ್ತಿನ ಅವಧಿಯಲ್ಲಿ ನಡೆದ ಚುನಾವಣೆಯನ್ನು ಅಸಿಂಧು ಎಂದು ಘೋಷಿಸಿದ 12 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯುತ್ತಿದೆ.