ಕುಟುಂಬದೊಂದಿಗೆ ಕಾಶಿಗೆ ಹೋಗಿದ್ದ ವೆಂಕಟಲಕ್ಷ್ಮಮ್ಮ ಎನ್ನುವ ಮಹಿಳೆ ಕಾಶಿಯಲ್ಲಿ ನಾಪತ್ತೆಯಾಗುತ್ತಾಳೆ. ನಾಪತ್ತೆಯಾದ ಮಹಿಳೆ ಅನ್ನ, ನೀರು ಬಿಟ್ಟು ಮತಿಭ್ರಮಣೆಗೆ ಒಳಗಾಗಿದ್ದಾಳೆ. ಅಂತಹ ಮಹಿಳೆಯನ್ನು ರಕ್ಷಿಸಿ ಕಾಶಿಯಿಂದ ಬೆಂಗಳೂರಿಗೆ ಕರೆತಂದ ಬೆಂಗಳೂರಿನ ಯುವಕ ವಿಶಾಲ್ ಕರೆತರುವ ಮೂಲಕ ಮಾನವೀಯತೆ ಮೆರೆದಿದ್ದಾನೆ.
ಸಂಬಂಧಿಕರೊಂದಿಗೆ ಕಾಶಿಯಾತ್ರೆಗೆ ಹೋಗಿದ್ದ ದೇವನಹಳ್ಳಿ ತಾಲೂಕಿನ ಮಲ್ಲೇಪುರ ಗ್ರಾಮದ ಸುಮಾರು 65 ವರ್ಷ ವಯಸ್ಸಿನ ವೆಂಕಟಲಕ್ಷ್ಮಮ್ಮ ಕಾಶಿಯಲ್ಲಿ ಅನಿರೀಕ್ಷಿತವಾಗಿ ತಪ್ಪಿಹೋಗುತ್ತಾರೆ. ತನ್ನವರು ಕಾಣದೇ, ಸಹಾಯ ಕೇಳಲು ಭಾಷೆ ಗೊತ್ತಾಗದೆ ಕಂಗಾಲಾಗಿ ಮೆಂಟಲ್ ಶಾಕ್ ಗೆ ಒಳಗಾಗುತ್ತಾರೆ. ಎರಡು ದಿನ ಕಾಶಿಯಲ್ಲಿ ಅಲೆದಾಡಿ, ಯಾರೋ ತೆಲುಗು ಭಾಷಿಕರು ವಾರಣಾಸಿಯಿಂದ ಬೆಂಗಳೂರು ಬರುವ ರೈಲು ಹತ್ತಿಸಿದರು. ಮೈಸೂರು ಎಕ್ಸ್ಪ್ರೆಸ್ ಟ್ರೈನ್ ನಲ್ಲಿ ಏನೂ ಮಾತಾಡದೆ ಕುಳಿತಿದ್ದರು. ಅದೇ ರೈಲಿನಲ್ಲಿ ವಾರಣಾಸಿಯಿಂದ – ಪ್ರಯಾಗರಾಜ್ ವರೆಗೂ ಪ್ರಯಾಣ ಬೆಳೆಸಿದ್ದ ಬೆಂಗಳೂರಿನ ಪತ್ರಕರ್ತ ಪ್ರಶಾಂತ್ ಈ ಮಹಿಳೆಯ ಹಿನ್ನೆಲೆ ತಿಳಿಯಲು ಮಾತನಾಡಿಸಿದರು. ಆದರೆ ಆಕೆ ಮೆಂಟಲ್ ಶಾಕ್ ಗೆ ಒಳಗಾಗಿದ್ದ ಕಾರಣ, ಆಕೆಯ ಹೆಸರು, ಹಾಗೂ ತಮ್ಮ ಊರಿನ ಹೆಸರು ಬಿಟ್ಟು ಬೇರೇನೂ ಮಾತನಾಡುತ್ತಲೇ ಇರಲಿಲ್ಲ. ಆ ಮಹಿಳೆಗೆ ಕೂಡಲೇ ಬೆಂಗಳೂರಿನ ಟಿಕೆಟ್ ವ್ಯವಸ್ಥೆ ಮಾಡಿ. ಆಕೆಯೊಂದಿಗೆ ಪ್ರಯಾಗದ ವರೆಗೂ ಬಂದ ಪ್ರಶಾಂತ್, ನಂತರ ಅದೇ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ವಿಶಾಲ್ ಎಂಬ ಯುವಕನಿಗೆ ಆ ಮಹಿಳೆ ಉಸ್ತುವಾರಿ ವಹಿಸಿದ್ರು.
ಈ ನಡುವೆ ಪ್ರಶಾಂತ್ ಆ ಮಹಿಳೆಯ ಪೋಟೋ ಹಾಗೂ ಆಕೆ ತಿಳಿಸಿದ ಅಲ್ಪ ಮಾಹಿತಿಯ ಹಾಗೂ ತಮ್ಮ ಸಂಪರ್ಕ ಸಂಖೆಗಳನ್ನು ಹಾಕಿ ವಾಟ್ಸಪ್ ಮೂಲಕ ಬೆಂಗಳೂರು ಹಾಗೂ ದೇವನಹಳ್ಳಿನ ಸ್ನೇಹಿತರ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದರು. ಬೆಳಗಾಗುವಷ್ಟರಲ್ಲಿ ಅವರ ಕುಟುಂಬದವರು ಪೋನ್ ಮೂಲಕ ಸಂಪರ್ಕಿಸಿದರು. ಆದರೆ ಮೆಂಟಲ್ ಶಾಕ್ ಗೆ ಒಳಗಾದ ಮಹಿಳೆ ಬೆಳಗಾಗುವಷ್ಟರಲ್ಲಿ ಕುಳಿತಿದ್ದ ಕಡೆಯಿಂದ ಕಣ್ಮರೆಯಾಗಿದ್ದರು. ಆಗ ಮತ್ತೊಂದು ಸಂಕಟ ಶುರುವಾಯ್ತು. ಹೌದು, ಆಕೆಯನ್ನು ನೋಡಿಕೊಳ್ತಿದ್ದ ವಿಶಾಲ್ ನಿದ್ದೆಗೆ ಜಾರಿ ಕಣ್ಬಿಡುವಷ್ಟರಲ್ಲಿ ಆಕೆ ಕಾಣಿಸುತ್ತಿರಲಿಲ್ಲ. ಆತಂಕಗೊಂಡ ವಿಶಾಲ್ ಇಡೀ ರೈಲು ಹುಡುಕಾಡಿದ್ರು. ಆ ಮಹಿಳೆ ಹಿಂದೆ ಎಲ್ಲೂ ಹೋಗಿ ಕುಳಿತುಬಿಟ್ಟಿದ್ರು. ಮತ್ತೆ ಆಕೆಯನ್ನು ತಮ್ಮ ಬೋಗಿಗೆ ಕರೆತರಲು ಹೋದರೆ ಆಕೆ ಗಲಾಟೆ ಶುರುಮಾಡಿದ್ರು. ಆದರೂ ಕಷ್ಟ ಪಟ್ಟು ತಮ್ಮ ಕೋಚ್ ಗೆ ಕರೆತರುವಲ್ಲಿ ವಿಶಾಲ್ ಸಫಲಾದರಾದರೂ. ರೈಲು ಭೂಸ್ವಾಲ್ ತಲುಪುವಷ್ಟರಲ್ಲಿ ಏಕಾಏಕಿ ರೈಲು ಇಳಿದು ಓಡಿಬಿಟ್ರು.
ಆದರೆ ವಿಶಾಲ್ ಮಹಾರಾಷ್ಟ್ರದ ಭೂಸಾವಾಲ್ ನಲ್ಲಿ ರೈಲು ಇಳಿಯಲಾಗಲಿಲ್ಲ. ಮುಂದಿನ ಅಂದರೆ ಅಲ್ಲಿಂದ 20 ಕಿಮೀ ನಂತರ ರೈಲು ಕ್ರಾಸಿಂಗ್ ವೇಳೆ ನಿಧಾನವಾಗಿ ಚಲಿಸುತ್ತಿತ್ತು. ಆಗಲೇ ಪ್ರಾಣವನ್ನೂ ಲೆಕ್ಕಿಸದೆ ತಮ್ಮ ಲಗೇಜ್ ನೊಂದಿಗೆ ರೈಲಿನಿಂದ ಹಾರಿದ ವಿಶಾಲ್ ನಾಲ್ಕು ಕಿಮೀ ನಡೆದು ಮತ್ತೊಂದು ರೈಲು ನಿಲ್ದಾಣ ತಲುಪಿ ಅಲ್ಲಿಂದ ಲೋಕಲ್ ರೈಲು ಹಿಡಿದು ಮತ್ತೇ ಭೂಸಾವಾಲ್ ನಿಲ್ದಾಣ ತಲುಪೊ ಮಹಿಳೆಗಾಗಿ ಹುಡುಕಾಡುತ್ತಾರೆ. ಆದರೆ ವೆಂಕಟ ಲಕ್ಷ್ನಮ್ಮ ಅಲ್ಲಿ ಕಾಣಲಿಲ್ಲ, ಸ್ಥಳೀಯ ರೈಲ್ವೇ ಪೊಲೀಸರು ಸರಿಯಾಗಿ ಸಹಕಾರ ಕೊಡಲಿಲ್ಲವಂತೆ. ಆದರೂ ಪಟ್ಟು ಬಿಡದ ವಿಶಾಲ್ ರೈಲಿನ ಹಳಿಗಳ ಮೇಲೆ ಓಡುತ್ತಿದ್ದ ಆ ವೆಂಕಟಲಕ್ಮ್ಮಮ್ಮರನ್ನು ಪತ್ತೆಹಚ್ಚಿದರು.
ಆದರೆ, ಅದಾಗಲೇ ವೆಂಕಟ ಲಕ್ಷ್ಮಮ್ಮ ಅಕ್ಷರಶಃ ಮತಿ ತಪ್ಪಿದವರಂತೆ ವರ್ತಿಸಲು ಶುರುಮಾಡಿದ್ದರು. ವಿಶಾಲ್ ನೊಂದಿಗೆ ಬರಲು ಒಪ್ಪದೇ ಆತನನ್ನೇ ಒಡೆಯಲು ಶುರುಮಾಡಿದ್ರು, ಈ ನಡುವೆ ಅವರ ಕುಟುಂಬ ಹಾಗೂ ಸ್ಥಳೀಯ ಮಹಾರಾಷ್ಟ್ರ ಪೋಲೀಸರೊಂದಿಗೆ ಸಂಪರ್ಕಸಾಧಿಸಿದ ಪತ್ರಕರ್ತ ಪ್ರಶಾಂತ್, ಭೂಸಾವಾಲ್ ನಿಂದ ಟ್ಯಾಕ್ಸಿ ಮಾಡಿ ಅದರಲ್ಲಿ ಆಕೆಯನ್ನು ಕೂಡಿಸಿ ಬೆಂಗಳೂರಿಗೆ ಕಳುಹಿಸುವಲ್ಲಿ ಸಫಲರಾದರು. ಅದಾಗಲೇ ಮಹಿಳೆ ನಾಲ್ಕುದಿನಗಳಿಂದ ನೀರು ಆಹಾರ ತ್ಯಜಿಸಿದ್ದರು. ಎಷ್ಟೇ ಪ್ರಯತ್ನ ಪಟ್ಟರೂ ಏನೂ ಸೇವಿಸದೇ ನಿತ್ರಾಣರಾಗಿದ್ದರು, ಟ್ಯಾಕ್ಸಿ ಹೊಸಪೇಟೆ ತಲುಪುವಷ್ಟರಲ್ಲಿ ವೆಂಕಟಲಕ್ಷ್ನಮ್ಮನವರ ಪ್ರಜ್ಞೆ ತಪ್ಪಿತು. ವಿಶಾಲ್ ಗಾಬರಿಗೊಂಡರು ಕೂಡಲೇ ಪ್ರಶಾಂತ್ ರ ಸಲಹೆಯಂತೆ, ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಕೆ ಚೇತರಿಸಿಕೊಂಡ ನಂತರ ಇದೀಗ ದೇವನಹಳ್ಳಿಗೆ ಕರೆತರುತ್ತಿದ್ದಾರೆ.
ಇನ್ನೇನು ಕೆಲವೇ ತಾಸುಗಳಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮರಳಿ ಕುಟುಂಬ ಸೇರುತ್ತಿದ್ದಾರೆ. ಯುವಕ ವಿಶಾಲ್ ಹಾಗೂ ಪತ್ರಕರ್ತ ಪ್ರಶಾಂತ್ ಅವರ ಮಾನವೀಯ ಕೆಲಸಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.