ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಂತರ ಅವ್ಯವಹಾರ ಆಗಿರುವುದು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿರುವುದಕ್ಕೆ ಸಂಬಂಧಿಸಿ, ಸಚಿವ ಮುನಿರತ್ನ ರಾಜೀನಾಮೆಗೆ ಆಗ್ರಹಿಸಿ ಫೆ. 23ರಂದು ಬೃಹತ್ ಪ್ರತಿಭಟನೆ ನಡೆಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ರಾಜಕೀಯ ಚಟುವಟಿಕೆ ಘಟಕದ ಅಧ್ಯಕ್ಷ ಚೆನ್ನಪ್ಪಗೌಡ ನೆಲ್ಲೂರು, “ಮುಖ್ಯಮಂತ್ರಿಯ ನವ ನಗರೋತ್ಥಾನ ಯೋಜನೆಯಡಿ ಕೆಆರ್ಐಡಿಎಲ್ ಮೂಲಕ ರಾಜರಾಜೇಶ್ವರಿ ನಗರದಲ್ಲಿ ನಡೆಸಲಾದ ಕಾಮಗಾರಿಗಳಲ್ಲಿ 118.26 ಕೋಟಿ ರೂಪಾಯಿ ಮೊತ್ತದ ಭ್ರಷ್ಟಾಚಾರ ನಡೆದಿದೆ. ಭ್ರಷ್ಟಾಚಾರದ ಸೂತ್ರಧಾರ ಮುನಿರತ್ನರವರ ರಾಜೀನಾಮೆಗೆ ಆಗ್ರಹಿಸಿ ಫೆ. 23ರ ಬುಧವಾರದಂದು ಬೃಹತ್ ಪ್ರತಿಭಟನೆ ಆಯೋಜಿಸಿದ್ದೇವೆ. ಪ್ರತಿಭಟನಾ ಮೆರವಣಿಗೆಯು ರಾಜರಾಜೇಶ್ವರಿನಗರದ ಬಿಬಿಎಂಪಿ ಕಚೇರಿಯಿಂದ ಆರಂಭವಾಗಿ, ರಾಜರಾಜೇಶ್ವರಿ ಮುಖ್ಯದ್ವಾರ, ಮೈಸೂರು ರಸ್ತೆ, ಬಿಎಚ್ಇಎಲ್, ಅತ್ತಿಗುಪ್ಪೆ, ವಿಜಯನಗರ, ಮಾಗಡಿ ರಸ್ತೆ ಟೋಲ್ಗೇಟ್, ರಾಜಾಜಿನಗರ ಆರನೇ ವಿಭಾಗ, ಡಾ. ರಾಜ್ಕುಮಾರ್ ರಸ್ತೆ, ನವರಂಗ್ ವೃತ್ತ, ದೇವಯ್ಯ ಪಾರ್ಕ್, ಹರಿಶ್ಚಂದ್ರ ಘಾಟ್, ಮಲ್ಲೇಶ್ವರಂ ವೃತ್ತ, ಶೇಷಾದ್ರಿಪುರಂ ಮುಖ್ಯರಸ್ತೆ ಮೂಲಕ ಗಾಂಧಿ ಪ್ರತಿಮೆಯನ್ನು ತಲುಪಲಿದೆ. ಸಾವಿರಾರು ಸಂಖ್ಯೆಯಲ್ಲಿ ಎಎಪಿ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು, ಸಾಹಿತಿಗಳು, ಗಣ್ಯರು ಭಾಗವಹಿಸಲಿದ್ದಾರೆ” ಎಂದು ಹೇಳಿದರು.
“ಆರ್ಆರ್ ನಗರದಲ್ಲಿ ನಕಲಿ ಬಿಲ್ಗಳನ್ನು ಸೃಷ್ಟಿಸಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲಾಗಿದೆ. ಕೆಲವು ಕಾಮಗಾರಿಗಳ ಅನುಷ್ಠಾನವೇ ಆಗಿಲ್ಲ. ಕೆಲವು ಕಾಮಗಾರಿಗಳಲ್ಲಿ ಹೆಚ್ಚುವರಿ ಅಳತೆ ನಮೂದಿಸಲಾಗಿದೆ. ಕೆಲವು ಕಾಮಗಾರಿಗಳ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಇನ್ನೂ ಕೆಲವು ಕಾಮಗಾರಿಗಳಲ್ಲಿ, ಟೆಂಡರ್ನಲ್ಲಿ ನಿಗದಿಪಡಿಸಿದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಒಟ್ಟು 114 ಕಾಮಗಾರಿಗಳಿಂದ ಸರ್ಕಾರದ ಬೊಕ್ಕಸಕ್ಕೆ 118.26 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಸ್ಪಷ್ಟ ಉಲ್ಲೇಖವಿದೆ. ಹೀಗಿದ್ದರೂ ಮುನಿರತ್ನರವರು ಅಧಿಕಾರದಲ್ಲಿ ಮುಂದುವರಿಯುವುದು ಸರಿಯಲ್ಲ” ಎಂದು ಚೆನ್ನಪ್ಪಗೌಡ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಮಾತನಾಡಿ, “ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯವರು ಜನವರಿ 24ರಂದೇ 60 ಪುಟಗಳ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಈವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಟೆಂಡರ್ನಲ್ಲಿ ನಿಗದಿಪಡಿಸಿದಂತೆಯೇ ಕಾಮಗಾರಿ ನಡೆದಿದೆ ಎಂದು ವರದಿ ನೀಡಿದ ಸಿವಿಲ್ ಸ್ಕ್ವೇರ್ ಕನ್ಸಲ್ಟಂಟ್ಸ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಲೋಕಾಯುಕ್ತ ವರದಿಯಲ್ಲಿ ಆಪಾದಿತರೆಂದು ಹೇಳಲಾಗಿರುವ ಎಲ್ಲ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಸಂಬಂಧಪಟ್ಟ ಶಾಸಕ ಮುನಿರತ್ನರವರನ್ನು ಸಚಿವ ಸ್ಥಾನದಿಂದ ಉಚ್ಚಾಟಿಸಿ ವಿಚಾರಣೆಗೆ ಒಳಪಡಿಸಬೇಕು. ಆಗ ಮಾತ್ರ ಹಗರಣದ ಸಂಪೂರ್ಣ ಸ್ವರೂಪ ಬಹಿರಂಗವಾಗಲಿದೆ” ಎಂದು ಹೇಳಿದರು.
ಎಎಪಿ ಮುಖಂಡರಾದ ರಾಜಶೇಖರ್ ದೊಡ್ಡಣ್ಣ, ಸುರೇಶ್ ರಾಥೋಡ್, ಜ್ಯೋತೀಶ್ ಕುಮಾರ್, ವಿಜಯ್ ಶಾಸ್ತ್ರಿಮಠ್ ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.