ಪ್ರಧಾನಿ ಮೋದಿ ವಿರುದ್ಧ ಸೆಟೆದು ನಿಂತು ರಾಷ್ಟ್ರ ರಾಜಕಾರಣದಲ್ಲಿ ಚದುರಂಗದಾಟ ಆಡಲು ಮುಂದಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಇದಕ್ಕಾಗಿ ರಾಷ್ಟ್ರೀಯ ಸಮಿತಿ ರಚನೆ ಮಾಡಲು ನಿರ್ಧರಿಸಿದ್ದಾರೆ. ಈ ಸಮಿತಿಯಲ್ಲಿ ಕನ್ನಡಿಗ, ಬಹುಭಾಷ ನಟ ಪ್ರಕಾಶ್ ರೈ ಅವರಿಗೆ ಪ್ರಮುಖ ಜವಾಬ್ದಾರಿ ನೀಡಲು ಕೆಸಿಆರ್ ತೀರ್ಮಾನಿಸಿದ್ದಾರೆ.
ಮೋದಿ ವಿರೋಧಿ ರಾಜಕೀಯದಲ್ಲಿ ಸಕ್ರಿಯರಾಗಿರುವ, ರಾಷ್ಟ್ರ ರಾಜಕಾರಣದ ವಿಚಾರಗಳಲ್ಲಿ ಜ್ಞಾನ ಹೊಂದಿರುವ, ಹಿಂದಿ, ಇಂಗ್ಲೀಷ್ ಮತ್ತು ದಕ್ಷಿಣ ಭಾರತೀಯ ಭಾಷೆಗಳ ಮೇಲೆ ಹಿಡಿತ ಹೊಂದಿರುವ ನಟ ಪ್ರಕಾಶ್ ರೈ ರನ್ನು ರಾಷ್ಟ ರಾಜಕಾರಣದಲ್ಲಿ ಬಳಸಿಕೊಳ್ಳಲು ಕೆ ಚಂದ್ರಶೇಖರ ರಾವ್ ಮುಂದಾಗಿದ್ದಾರೆ.
ಪ್ರಕಾಶ್ ರೈ ಅವರನ್ನು ಶೀಘ್ರವೇ ರಾಜ್ಯಸಭೆಗೆ ಕಳಿಸಲು ಕೂಡ ತೆಲಂಗಾಣ ರಾಷ್ಟ್ರ ಸಮಿತಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಮೂರು ದಿನಗಳ ಹಿಂದೆ ಕೆ ಚಂದ್ರಶೇಖರ ರಾವ್ ಮುಂಬೈ ಪ್ರವಾಸ ಕೈಗೊಂಡಾಗ ಪ್ರಕಾಶ್ ರೈ ಅವರು ಜೊತೆಯಲ್ಲೇ ಇದ್ದರು. ಶರದ್ ಪವಾರ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ವೇಳೆಯೂ ಪ್ರಕಾಶ್ ರೈ ಉಪಸ್ಥಿತರಿದ್ದರು.