ಅಕ್ರಮವಾಗಿ ಬಂಧನದಲ್ಲಿಟ್ಟ 35 ಕ್ಕೂ ಅಧಿಕ ಮಧ್ಯಪ್ರದೇಶ ಮೂಲದ ಕೃಷಿ ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಗುಬ್ಬೇವಾಡ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅಕ್ರಮ ಬಂಧನದಲ್ಲಿದ್ದ ಮಧ್ಯಪ್ರದೇಶದ ರತ್ನಾ ಜಿಲ್ಲೆಯ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
10 ಮಕ್ಕಳು ಸೇರಿ 35 ಕಾರ್ಮಿಕರನ್ನು ಇಂಡಿ ಪೊಲೀಸರು ರಕ್ಷಿಸಿದ್ದಾರೆ. ಕಾರ್ಮಿಕರನ್ನು ಕಬ್ಬಿನ ಗದ್ದೆಯಲ್ಲಿ ಗುಬ್ಬೇವಾಡ ಗ್ರಾಮದ ಜಮೀನೊಂದರ ಮಾಲೀಕ ಹಾಗೂ ಮಧ್ಯಪ್ರದೇಶದ ರೋಹಿತ್ ಎಂಬುವವರು ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದರು. ಅದಕ್ಕಾಗಿ ಅವರು ರಕ್ಷಣೆಗಾಗಿ ಮಧ್ಯಪ್ರದೇಶ ರತ್ನಾ ಜಿಲ್ಲೆಯ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದಾರೆ. ನಂತರ ಮಧ್ಯಪ್ರದೇಶದ ಜಿಲ್ಲಾಧಿಕಾರಿ ವಿಜಯಪುರ ಎಸ್ಪಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
15 ಕುಟುಂಬಗಳ ಸುಮಾರು 35 ಕೂಲಿ ಕಾರ್ಮಿಕರು ಕಳೆದ ಮೂರು ತಿಂಗಳಿಂದ ಆರೋಗ್ಯ, ಆಹಾರ, ವಸತಿ ಮತ್ತು ಶೌಚಾಲಯಕ್ಕೆ ಸೂಕ್ತ ಸೌಲಭ್ಯಗಳಿಲ್ಲದೆ ತಾತ್ಕಾಲಿಕ ಟೆಂಟ್ಗಳಲ್ಲಿ ವಾಸಿಸುತ್ತಿದ್ದರು.
ರಕ್ಷಿಸಲ್ಪಟ್ಟವರಲ್ಲಿ 22 ಪುರುಷರು, 13 ಮಹಿಳೆಯರು ಮತ್ತು 10 ಮಕ್ಕಳು. ಮಧ್ಯವರ್ತಿ ಶರಣಪ್ಪ ಕವಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. “ಶರಣಪ್ಪ ಮಧ್ಯಪ್ರದೇಶದಿಂದ ಇಂಡಿಗೆ ನೌಕರರನ್ನು ಸಾಗಿಸಲು ವ್ಯವಸ್ಥೆ ಮಾಡಿದ್ದ, ಗುಬ್ಬೇವಾಡದಲ್ಲಿ ಕಬ್ಬು ಕಟಾವು ಮಾಡಲು ಪ್ರತಿ ಕುಟುಂಬಕ್ಕೆ 40,000 ರೂ.ಗಳನ್ನು ಆರಂಭಿಕ ಪಾವತಿಯಾಗಿ ಪಾವತಿಸಿದ್ದ. ಆದರೆ ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದ್ದು, ಮೊದಲೇ ಹೇಳಿದ್ದಂತೆ ಬಾಕಿ ಹಣವನ್ನು ನೀಡಲು ಸತಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದ ರತ್ನಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಕಾರ್ಮಿಕರು ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದರು. ವಿಷಯ ತಿಳಿದ ಬಳಿಕ ರತ್ನಾ ಜಿಲ್ಲೆಯ ಜಿಲ್ಲಾಧಿಕಾರಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಮಾಹಿತಿ ಮೇರೆಗೆ ಕಬ್ಬಿನ ಜಮೀನಿನ ಮೇಲೆ ದಾಳಿ ಮಾಡಿದ ಇಂಡಿ ಪೊಲೀಸರು, ಅಕ್ರಮ ಬಂಧನದಲ್ಲಿದ್ದ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ. ಅವರನ್ನು ಶೀಘ್ರವೇ ವಾಪಸ್ ಮಧ್ಯ ಪ್ರದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಡಿವೈಎಸ್ ಪಿ ಶ್ರೀಧರ್ ಹೇಳಿದ್ದಾರೆ.