“ಇದನ್ನು ವಿವಾದ ಮಾಡಲು ಬಯಸುತ್ತಿಲ್ಲ. ಇದರ ಬಗ್ಗೆ ಚರ್ಚೆ ಮಾಡುವುದಕ್ಕೂ ಇದು ಸಮಯವಲ್ಲ. ಆದರೆ, ವಿದೇಶಕ್ಕೆ ತೆರಳಿ MBBS ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ಶೇಕಡಾ 90ರಷ್ಟು ಮಂದಿ ಭಾರತದಲ್ಲಿ ನಿರ್ವಹಿಸುವ ಅರ್ಹತಾ ಪರೀಕ್ಷೆಯಲ್ಲಿ ಫೇಲ್ ಆಗುತ್ತಿದ್ದಾರೆ” ಎಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಭಾರತದಲ್ಲಿ ಅದರಲ್ಲೂ ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ವೈದ್ಯ ಶಿಕ್ಷಣ ಪಡೆಯಲು ವಿದೇಶಗಳಿಗೆ ಹೋಗುತ್ತಾರೆ. ಅದೇ ರೀತಿಯಲ್ಲಿ ಉಕ್ರೇನ್ ನಲ್ಲಿ ಸಹ ಭಾರತದ 18ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಹೀಗೆ ವಿದೇಶಗಳಲ್ಲಿ MBBS ಪೂರೈಸಿದವರು ಭಾರತದಲ್ಲಿ ವೈದ್ಯ ಸೇವೆ ಸಲ್ಲಿಸಬೇಕು ಎಂದರೇ ಫಾರೀನ್ ಮೆಡಿಕಲ್ ಗ್ರಾಜುಯೇಟ್ಸ್ ಎಕ್ಸಾಮಿನೇಷನ್ (FMGE) ಎಂಬ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಶೇಕಡಾ 90ರಷ್ಟು ಮಂದಿ ಪಾಸ್ ಆಗುತ್ತಿಲ್ಲ ಎಂದು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದೆ. ಭಾರತೀಯರನ್ನು ಪಾರು ಮಾಡಲು ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಹೆಸರಿನಲ್ಲಿ ಏರ್ ಲಿಫ್ಟ್ ಮಾಡುತ್ತಿದೆ. ಈವರೆಗೂ ಎರಡು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದೆ. ಸದ್ಯ ಸುಮಾರು 15ಸಾವಿರ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ. ಇವತ್ತು ಖಾರ್ಕಿವ್ ನಲ್ಲಿ ಕನ್ನಡಿಗ ವಿದ್ಯಾರ್ಥಿಯೊಬ್ಬ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪ್ರತಿನಿಧಿ ರಂದೀಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮಾಡಿ, ವಿದ್ಯಾರ್ಥಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ, BJP ಸರ್ಕಾರಕ್ಕೆ ಉಕ್ರೇನ್ ನಿಂದ ಭಾರತೀಯರನ್ನು ಹಿಂದಕ್ಕೆ ಕರೆತರಲು ಸರಿಯಾದ ಯೋಜನೆ ರೂಪಿಸಿಲ್ಲ. ಅಷ್ಟೇ ಅಲ್ಲ, ಇದೆ ಸಂದರ್ಭದಲ್ಲಿ ಪ್ರಹ್ಲಾದ್ ಜೋಶಿ, ವಿದ್ಯಾರ್ಥಿಗಳನ್ನು ಅಪಮಾನಿಸುವ ಹಾಗೆ ಮಾತನಾಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ರಾಜ್ಯಸಭಾ ಸದಸ್ಯ ರಿಪುನ್ ಬೋರಾ ಸಹ ಪ್ರಹ್ಲಾದ್ ಜೋಶಿ ಹೇಳಿಕೆಯನ್ನು ಖಂಡಿಸಿದ್ದಾರೆ.
ಪತ್ರಕರ್ತ ಪ್ರೇಮ್ ಪಾನಿಕರ್ ಟ್ವೀಟಿಸಿ, ಬಹುಷಃ ಮುಂದಿನ ಹೇಳಿಕೆಯಲ್ಲಿ, ನೆಹರೂ ಏನೊಂದು ಯೋಚಿಸದೆ ಇಡೀ ದೇಶಕ್ಕೆ ಒಂದು ಲಕ್ಷ ಸೀಟ್ ಗಳನ್ನು ನಿಗದಿ ಮಾಡಿದ್ದಾರೆ. ಅಂದರೆ 15 ಆಕಾಂಕ್ಷಿಗಳಿಗೆ ಒಂದು ಸೀಟ್ ಎಂದು ಹೇಳಿ.. ಉಳಿದ 14ಮಂದಿ ಎಲ್ಲಿಗೆ ಹೋಗ್ತಾರೆ? ಎಂದು ವ್ಯಂಗ್ಯ ಮಾಡಿದ್ದಾರೆ.
ಮತ್ತೊಬ್ಬ ಜರ್ನಲಿಸ್ಟ್ ಅರವಿಂದ ಗುಣಶೇಖರ್ ಟ್ವೀಟ್ ಮಾಡಿ, ದೇಶದಲ್ಲಿ 85ಸಾವಿರ MBBS ಸೀಟ್ ಮಾತ್ರ ಇದೆ. ಆದರೆ, 2021ರ ನೀಟ್ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಸಂಖ್ಯೆ 16.01 ಲಕ್ಷ. ಅಂದರೆ ಒಂದು MBBS ಸೀಟ್ ಗಾಗಿ 19 ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ. ಮೆಡಿಸಿನ್ ಓದಲು ಉಕ್ರೇನ್ ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಯಾವಾಗಲಾದರೂ ಯೋಚನೆ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.